ಬಾಗೇಪಲ್ಲಿ/ಚಿಕ್ಕಬಳ್ಳಾಪುರ: ಉತ್ತಮ ಮಳೆ ಬಂದು, ಕೆರೆ ಕುಂಟೆಗಳು ತುಂಬಿದರೆ ಅದು ಎಲ್ಲರಿಗೂ ಸಂತಸದ ವಿಷಯ. ಆದರೆ ತಾಲೂಕಿನ ಕೊತ್ತಕೋಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಡಪಲ್ಲಿ ಗ್ರಾಮದ ಜನರಿಗೆ ಮಾತ್ರ ನರಕಯಾತನೆ ಶುರುವಾಗಿದೆ.
ಹೌದು, ಮಾಡಪಲ್ಲಿ ಗ್ರಾಮ ಸುತ್ತಮುತ್ತಲೂ ಸುಂದರ ಬೆಟ್ಟಗುಡ್ಡಗಳಿಂದ ಆವೃತವಾದ ಕುಗ್ರಾಮ. ಆದರೆ ಆ ಸುಂದರ ಬೆಟ್ಟಗುಡ್ಡಗಳೇ ಅವರ ಭವಿಷ್ಯಕ್ಕೆ ಕಂಟಕವಾಗಿ ಪರಿಣಮಿಸಿದಂತಾಗಿದೆ. ಸುತ್ತಲಿನ ಪ್ರದೇಶದಲ್ಲಿ ನಡೆಯುತ್ತಿರುವ ಗಣಿಗಾರಿಕೆಯಿಂದ ಜಲಮೂಲಗಳಿಗೆ ಹರಿದು ಬರುವ ಕೆಮ್ಮಣ್ಣಿನಿಂದಾಗಿ ಕೆರೆ, ಕುಂಟೆಗಳಲ್ಲಿ ಹೂಳು ತುಂಬಿದೆ. ಜತೆಗೆ ಕೆಮ್ಮಣ್ಣಿನ ನೀರು ಕೊಳವೆ ಬಾವಿ(ಬೋರ್ವೆಲ್)ಗೆ ಹರಿದು ಬಂದು, ಮನೆಗಳಿಗೂ ಅದೇ ನೀರು ಸರಬರಾಜಾಗುತ್ತಿದೆ.
ಇದರಿಂದ ಗ್ರಾಮದ ಜನರು ವಿವಿಧ ರೋಗ ರುಜುನುಗಳಿಂದ ಬಳಲುತ್ತಿದ್ದಾರೆ. ಜತೆಗೆ ರಸ್ತೆಗಳು ಹಾಳಾಗಿದ್ದು, ತುರ್ತು ಸಂದರ್ಭಗಳಲ್ಲಿ ಪ್ರಾಣ ಹಾನಿಯೂ ಆಗುವ ಸಂಭವವಿದೆ. ಹಾಗಾಗಿ ದಯವಿಟ್ಟು ಗಣಿಗಾರಿಕೆಯನ್ನು ಸಂಪೂರ್ಣ ನಿಷೇಧಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಬೆಟ್ಟ ಗುಡ್ಡಗಳಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದ ಜನತೆ ಹಾಗೂ ಜಾನುವಾರುಗಳಿಗೆ ತೀವ್ರ ಸಮಸ್ಯೆಗಳು ಎದುರಾಗಿವೆ. ಬೆಟ್ಟಗುಡ್ಡಗಳನ್ನೇ ನಂಬಿಕೊಂಡು ಕುರಿ, ಮೇಕೆ ಸಾಕಾಣಿಕೆ ಮಾಡುತ್ತಿದ್ದ ಬಡ ಜನರು ಇದೀಗ ಬೀದಿಗೆ ಬರುವ ಪರಿಸ್ಥಿತಿ ಎದುರಾಗಿದೆ. ಬೆಟ್ಟದಲ್ಲಿ ಪುರಾತನ ಮರಗಳು, ಸಾವಿರಾರು ಗಿಡಗಂಟಿಗಳು ಸರ್ವನಾಶವಾಗಿವೆ.
ಶಾಶ್ವತ ಪರಿಹಾರದ ಮಾತು ತಪ್ಪಿದ ಉಸ್ತುವಾರಿ ಸಚಿವರು:
ಈ ಬಗ್ಗೆ ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಕೆ.ಸುಧಾಕರ್ ಅವರ ಗಮನಕ್ಕೆ ತರಲಾಗಿತ್ತು. ಆಗ ಸಚಿವರು ಮಾಡಪಲ್ಲಿ ಗ್ರಾಮದ ಬೆಟ್ಟದ ನೀರು ಹರಿದು ಬರುತ್ತಿದ್ದು, ಕುಡಿಯುವ ನೀರಿನ ಸಮಸ್ಯೆ ನನ್ನ ಗಮನಕ್ಕೆ ಬಂದಿದೆ. ಇದಕ್ಕೆ ಶಾಶ್ವತ ಪರಿಹಾರದ ಕ್ರಮ ಕೈಗೊಳ್ಳುತ್ತೇನೆ ಎಂದು ಟ್ವೀಟ್ ಮೂಲಕ ಆಶ್ವಾಸನೆ ಕೊಟ್ಟಿದ್ದರು. ಆದರೆ ಆಶ್ವಾಸನೆ ಹುಸಿಯಾಗಿದೆ.
ರಾಜಕಾರಣಿಗಳಿಗಿಂತ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಗ್ರಾಮೀಣ ಜನರ ಬದುಕು, ಬವಣೆಗಳ ಬಗ್ಗೆ ಕಾಳಜಿ ಇಲ್ಲದಿರುವುದೇ ಇದಕ್ಕೆ ಕಾರಣ ಎನ್ನುತ್ತಿದ್ದಾರೆ ಗ್ರಾಮಸ್ಥರು. ಏಕೆಂದರೆ ಕಲ್ಲು ಗಣಿಗಾರಿಕೆ ಗ್ರಾಮ ಪಂಚಾಯತ್ ಅಥವಾ ತಾಲೂಕು ಮಟ್ಟದ ಅಧಿಕಾರಿಗಳಿಗಿಂತ ಜಿಲ್ಲಾ ಮಟ್ಟದ ಅಧಿಕಾರಿಗಳ ನಿರ್ಣಯಗಳು ಮುಖ್ಯವಾಗಿರುತ್ತವೆ. ಅವರೇ ಕ್ರಮ ಕೈಗೊಳ್ಳದಿದ್ದಾಗ ಇಂತಹ ಸಮಸ್ಯೆಗಳು ಉದ್ಭವಿಸಲು ಕಾರಣ ಎಂದು ದೂರಿದ್ದಾರೆ.