ಚಿಕ್ಕಬಳ್ಳಾಪುರ: ಮೇಕೆದಾಟು ಯೋಜನೆ ಕುರಿತು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಸೋಮವಾರ ಜಿಲ್ಲೆಯ ಶಿಡ್ಲಘಟ್ಟ ನಗರದಲ್ಲಿ ಕಾಂಗ್ರೆಸ್ ಸದಸ್ಯತ್ವ ಸಭೆಗೆ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮ ಕಾರ್ಯಕ್ರಮ ಹೈಜಾಕ್ ಮಾಡಿದ್ದು ಅಂತಾ ಹೇಳಿದ್ರಲ್ಲಾ, ಅದು ಯಾಕೆ ಅಂತಾ ಹೇಳಲಿ. ಈಗ ಅವರು ಮಾಡಲು ಹೊರಟಿರುವ 'ಜನತಾ ಜಲಧಾರೆ' ಕಾರ್ಯಕಮ್ರಕ್ಕೆ ನಾವು ಬೆಂಬಲ ನೀಡುತ್ತೇವೆ. ಆದರೆ, ಜಲಧಾರೆ ಅರ್ಥ ಏನು? ಎಂದು ಹೇಳಲಿ ಎಂದು ಟಾಂಗ್ ನೀಡಿದ್ದಾರೆ.
ಇದನ್ನೂ ಓದಿ: 'ಜನತಾ ಜಲಧಾರೆ' ಕಾರ್ಯಕ್ರಮಕ್ಕೆ ಜೆಡಿಎಸ್ ಸಿದ್ಧತೆ ?
ಮೇಕೆದಾಟು ಯೋಜನೆಯಿಂದ ನೀರು ಹರಿಯಲ್ಲ ಎಂದಿದ್ದ ಸಿಎಂ ಈಗ ಬಜೆಟ್ನಲ್ಲಿ ಯೋಜನೆಗೆ ಸಾವಿರ ಕೋಟಿ ರೂ. ಇಟ್ಟಿದ್ದು ಯಾಕೆ?. ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಮಧ್ಯೆ ಇಟ್ಟಿದ್ದು ಯಾಕೆ?. ಮೇಕೆ ದಾಟು ಯೋಜನೆ ನಮ್ಮ ನೀರು ನಮ್ಮ ಹಕ್ಕು ಎಂದು ಹೇಳಬೇಕಿತ್ತು. ಅವರನ್ನು ಕೇಳಿ ಕೋಳಿ ಕೋಯ್ದು, ಮಸಾಲೆ ಅರಿಯುವಂತದ್ದು ಏನಿದೆ?.
ಶೇಖಾವತ್ ಬಳಿ ನಿಮ್ಮ ಬದ್ದತೆ ತೋರದಿರುವುದೇ ನಿಮ್ಮ ವೈಫಲ್ಯಕ್ಕೆ ಕಾರಣ. ಈಗ ಬಜೆಟ್ನಲ್ಲಿ ಸಾವಿರ ಕೋಟಿ ಇಟ್ಟಿದ್ದೀರಲ್ವಾ? ಕೆಲಸ ಆರಂಭಿಸಿ. ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಕೊರತೆ ಇದೆ. ಇದರಿಂದ ಟ್ಯಾಂಕರ್ ಮಾಫಿಯಾ ತಲೆಯೆತ್ತಿದೆ. ಆದಷ್ಟು ಬೇಗ ಮೇಕೆದಾಟು ಯೋಜನೆ ಅನುಷ್ಠಾನ ಮಾಡಿ ಎಂದು ಡಿಕೆಶಿ ಸಲಹೆ ನೀಡಿದರು.
ಇನ್ನು ಕ್ಯಾತೆ ಮಾಡುವುದೇ ತಮಿಳುನಾಡು ಸರ್ಕಾರದ ಮೂಲ ಉದ್ದೇಶವಾಗಿದೆ. ನೀರಿನ ರಾಜಕೀಯ ಮಾಡುವುದೇ ಅವರ ಉದ್ದೇಶ. ಇದರಲ್ಲಿ ಎರಡು ರಾಜ್ಯಗಳ ಮುಖ್ಯಮಂತ್ರಿಗಳನ್ನ ಮುಖಾಮುಖಿ ಮಾಡಿಸಲಿ. ನಮ್ಮದೇನೂ ಅಭ್ಯಂತರವಿಲ್ಲ ಎಂದು ಡಿ.ಕೆ ಶಿವಕುಮಾರ್ ಹೇಳಿದರು.
ಪೊಲೀಸ್ ಇಲಾಖೆಯ ವಿರುದ್ಧ ಭ್ರಷ್ಟಚಾರ ಆರೋಪ: ಡಿ.ಕೆ ಶಿವಕುಮಾರ್ ರಾಜ್ಯ ಪೊಲೀಸ್ ಇಲಾಖೆಯ ಮೇಲೆ ಗಂಭೀರ ಭ್ರಷ್ಟಚಾರದ ಆರೋಪ ಮಾಡಿದ್ದಾರೆ. ಹೋಟೆಲ್ ಮೆನುವಿನಂತೆ ಆಯಾ ಹುದ್ದೆಗಳಿಗೆ ರೇಟ್ ಫಿಕ್ಸ್ ಮಾಡಿದ್ದಾರೆ. ವರದಿಯಂತೆ ಪಿಎಸ್ಐಗೆ ಇಷ್ಟು, ಸಿಪಿಐ, ಎಸಿಪಿ, ಡಿಸಿಪಿ ಹುದ್ದೆಗಳಿಗೆ ವರ್ಷಕ್ಕೆ ಇಂತಿಷ್ಟು ರೇಟ್ ಫಿಕ್ಸ್ ಮಾಡಿದ್ದಾರೆ ಎಂಬ ಮಾಹಿತಿ ಬಯಲಾಗಿದೆ. ಸಿಎಂ ಆಗಿ ನೀವೇ ಜವಾಬ್ದಾರಿ ಹೊತ್ತುಕೊಳ್ಳಬೇಕು. ಬಿಜೆಪಿ ಸರ್ಕಾರ ಭ್ರಷ್ಟ ಸರ್ಕಾರ ಎಂದು ಹೇಳುತ್ತಾ ನಾವು ಬಂದಿದ್ದೇವೆ ಎಂದು ಕಿಡಿಕಾರಿದರು.
ಇದನ್ನೂ ಓದಿ: ಬಜೆಟ್ ಅಧಿವೇಶನದ ನಂತರ ಜೆಡಿಎಸ್ ಜನತಾ ಜಲಧಾರೆ ಯಾತ್ರೆ