ಚಿಂತಾಮಣಿ/:ಚಿಕ್ಕಬಳ್ಳಾಪುರ: ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ತರಲು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥ ನಾರಾಯಣ ಚಿಂತಾಮಣಿಯಲ್ಲಿ ಎಂಎಲ್‌ಸಿ ಚುನಾವಣೆ ಪ್ರಚಾರದ ವೇಳೆ ತಿಳಿಸಿದರು.
ನಗರದ ಕೆ.ಎಂ.ಡಿ. ಕಲ್ಯಾಣ ಮಂಟಪದಲ್ಲಿ ಬಿಜೆಪಿ ಅಭ್ಯರ್ಥಿ ಪರ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರದ ವೇಳೆ ಸಭೆಯಲ್ಲಿ ಮಾತನಾಡಿದ ಡಿಸಿಎಂ, ಶಿಕ್ಷಕರು, ಪದವೀಧರರು ಬಿಜೆಪಿ ಕಡೆ ಹೆಚ್ಚಿನ ಒಲವು ಹೊಂದಿದ್ದಾರೆ. ರಾಜ್ಯ ಸರ್ಕಾರವು ಪ್ರಾಥಮಿಕ, ಪ್ರೌಢ ಹಾಗೂ ಉನ್ನತ ಶಿಕ್ಷಣದಲ್ಲಿ ಬದಲಾವಣೆಯನ್ನು ತರುತ್ತಿದೆ. ಉನ್ನತ ಶಿಕ್ಷಣದಲ್ಲಿ ಉದ್ಯೋಗ ಪೂರಕ ಶಿಕ್ಷಣ ನೀತಿಯನ್ನು ಜಾರಿಗೊಳಿಸಲಾಗುತ್ತಿದೆ ಎಂದರು.
ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಮಾತನಾಡಿ, ದೇಶದ ಪ್ರತಿಯೊಬ್ಬರಿಗೂ ಶಿಕ್ಷಣ, ಉದ್ಯೋಗ ದೊರೆಯುವಂತಹ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ರೂಪಿಸಿದ್ದಾರೆ. ರಾಷ್ಟ್ರಾದ್ಯಂತ ಏಕ ರೂಪದ ಶಿಕ್ಷಣ ನೀತಿ, ಪ್ರಾಥಮಿಕ ಹಂತದಲ್ಲಿ ಆಯಾ ರಾಜ್ಯಗಳ ಮಾತೃ ಭಾಷೆಯಲ್ಲಿ ಶಿಕ್ಷಣ ಎಂಬ ನೂತನ ಶಿಕ್ಷಣ ನೀತಿ ವಿಶೇಷವಾಗಿದೆ. ಇದು ಅನುಷ್ಠಾನಕ್ಕೆ ಬಂದ ನಂತರ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯಾಗುತ್ತದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ. ಸುಧಾಕರ್, ಸಂಸದ ಪಿ.ಸಿ.ಮೋಹನ್, ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ಅಭ್ಯರ್ಥಿ ಚಿದಾನಂದಗೌಡ, ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ರಾಮಲಿಂಗಪ್ಪ ಭಾಗವಹಿಸಿದ್ದರು.