ಬಾಗೇಪಲ್ಲಿ: ಹೋಂ ಕ್ವಾರಂಟೈನ್ನಲ್ಲಿದ್ದ ಸುಮಾರು 30 ಜನರಿಗೆ ತಾಲೂಕಿನ ಬಿಳ್ಳೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ಸಿ.ಎನ್.ಸತ್ಯನಾರಾಯಣರೆಡ್ಡಿ ಮಾರ್ಗದರ್ಶನದಲ್ಲಿ ಗಂಟಲು ದ್ರವ ಪರೀಕ್ಷೆ ಮತ್ತು ಆರೋಗ್ಯ ತಪಾಸಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಿ.ಎನ್.ಸತ್ಯನಾರಾಯಣರೆಡ್ಡಿ ಮಾತನಾಡಿ, ಇಡೀ ವಿಶ್ವವೇ ಕೊರೊನಾ ಮಹಾಮಾರಿಗೆ ಬೆಚ್ಚಿಬಿದ್ದಿದೆ. ಅಮೆರಿಕದಲ್ಲಿ ಕೊರೊನಾ ಸೋಂಕು ತಗುಲಿರುವ ಒಬ್ಬ ವ್ಯಕ್ತಿ ಚಿಕಿತ್ಸೆಗೆ ಸ್ವಂತ 50 ಲಕ್ಷ ರೂ. ಖರ್ಚು ಮಾಡಬೇಕಾಗುತ್ತದೆ. ಇಂತಹ ಪರಿಸ್ಥಿತಿ ನಮ್ಮ ದೇಶದಲ್ಲಿ ಇಲ್ಲ. ಸೋಂಕಿತ ವ್ಯಕ್ತಿಗೆ ಸರ್ಕಾರವೇ ಉಚಿತ ಚಿಕಿತ್ಸೆ ನೀಡಿ ಗುಣಮುಖ ಮಾಡಲು ಹರಸಾಹಸ ಪಡಬೇಕಾಗಿದೆ. ಈ ಕಾರಣದಿಂದ ಯಾರೊಬ್ಬರೂ ಕೂಡಾ ಕೊರೊನಾ ವೈರಸ್ ಬಗ್ಗೆ ನಿರ್ಲಕ್ಷ್ಯ ಮಾಡದೆ ಎಚ್ಚರಿಕೆ ವಹಿಸಿ ಎಂದು ಮನವಿ ಮಾಡಿದ್ದಾರೆ.
ತುರ್ತು ಪರಿಸ್ಥಿತಿಯಲ್ಲಿ ಮನೆಯಿಂದ ಹೊರಗಡೆ ಬರಬೇಕಾದರೆ ತಪ್ಪದೇ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದ ಅವರು,
ಪ್ರತಿನಿತ್ಯ ಯೋಗ, ವ್ಯಾಯಾಮ, ಪ್ರಾಣಾಯಮ ಮಾಡಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.