ಚಿಕ್ಕಬಳ್ಳಾಪುರ: ಅನುಮಾನಾಸ್ಪದವಾಗಿ ಗಂಡ-ಹೆಂಡತಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಗೌರಿಬಿದನೂರು ನಗರದ ಶನೇಶ್ವರ ದೇವಸ್ಥಾನ ಬಳಿ ಬೆಳಕಿಗೆ ಬಂದಿದೆ.
ಮೃತರನ್ನು 50 ವರ್ಷದ ಮಹಿಳೆ ಹಾಗೂ 55 ವರ್ಷದ ಪುರುಷ ಎಂದು ಗುರುತಿಸಲಾಗಿದ್ದು, ಈ ದಂಪತಿ ನಗರದಲ್ಲಿ ಚಿಂದಿ ಆಯುತ್ತಿದ್ದರು ಎಂದು ತಿಳಿದು ಬಂದಿದೆ. ದೇವಸ್ಥಾನದ ಬಳಿ ಇರುವ ವರ್ಕ್ ಬೋರ್ಡ್ ಕಟ್ಟಡದ ಮೇಲೆ ಕೊಳೆತ ಸ್ಥಿತಿಯಲ್ಲಿ ಇವರ ಮೃತದೇಹಗಳು ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಸುಮಾರು ಎರಡು ಮೂರು ದಿನಗಳ ಹಿಂದೆ ಸಾವನ್ನಪ್ಪಿರುವುದಾಗಿ ಶಂಕಿಸಲಾಗಿದ್ದು, ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ.
ಲಾಕ್ಡೌನ್ ಹಿನ್ನೆಲೆ ಸಂಪಾದನೆ ಇಲ್ಲದ ಕಾರಣ ಹಸಿವು ತಾಳಲಾರದೆ ವಿಷ ಸೇವಿಸಿ ಸಾವನ್ನಪ್ಪಿರಬಹುದು ಅಥವಾ ಯಾರಾದರೂ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗುತ್ತಿದೆ. ಸ್ಥಳಕ್ಕೆ ಸಿಪಿಐ ರವಿ ಹಾಗೂ ನಗರ ಠಾಣೆಯ ಪಿಎಸ್ಐ ಅವಿನಾಶ್ ಭೇಟಿ ನೀಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.