ಚಿಕ್ಕಬಳ್ಳಾಪುರ: 2020ನೇ ವರ್ಷ ಬಹುತೇಕ ಕೊರೊನಾದಿಂದಲೇ ಮುಗಿಯುತ್ತೇನೋ ಎಂಬ ಅನಿಸಿಕೆ ಜನರಲ್ಲಿದೆ. ಜನರಲ್ಲಿ ನಡುಕ ಹುಟ್ಟಿಸಿದ್ದ ಈ ಸೋಂಕು ಅವರಿಗೆ ಆರೋಗ್ಯ ಪಾಠವನ್ನೂ ಮಾಡಿದೆ. ಸೋಂಕು ಹರಡುವಿಕೆ ಜನರನ್ನು ಆಗಾಗ ಆಸ್ಪತ್ರೆಗಳಿಗೆ ಎಡತಾಕೋದನ್ನು ತಪ್ಪಿಸಿದೆ.
ಇದರ ಜೊತೆಗೆ ಸಣ್ಣ ಪುಟ್ಟ ನೆಗಡಿ, ತಲೆನೋವು, ಜ್ವರ, ಚಿಕೂನ್ ಗುನ್ಯಾ ಅಂತ ಹೇಳ್ಕೊಂಡು ಆಸ್ಪತ್ರೆಗೆ ಬರೋರ ಸಂಖ್ಯೆಯೂ ಕಡಿಮೆಯಾಗಿತ್ತು. ಲಾಕ್ಡೌನ್ ಇದ್ದ ಕಾರಣದಿಂದ ಕೆಲವರಿಗೆ ಮನೆಯಲ್ಲೇ ಉಪಚಾರ ಮಾಡಿದ್ದು ಎಲ್ಲ ಕಾಯಿಲೆಗಳು ದೂರವಾಗಿವೆ ಅನ್ನೋದು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಸರ್ಜನ್ ರಮೇಶ್ ಅಭಿಪ್ರಾಯವಾಗಿದೆ.
ಕೋವಿಡ್ ವಿಚಾರಕ್ಕೆ ಬರುವುದಾದರೆ ಚಿಕ್ಕಬಳ್ಳಾಪುರದಲ್ಲಿ ಆಶಾದಾಯಕ ವಾತಾವರಣ ನಿರ್ಮಾಣವಾಗಿದೆ. ಜಿಲ್ಲೆಯ ಸರ್ಕಾರಿ ಕೋವಿಡ್ ಕೇರ್ ಸೆಂಟರ್ನಲ್ಲಿ ಸೋಂಕಿನಿಂದ ಗುಣಮುಖರಾಗುವವರ ಸಂಖ್ಯೆ ಹೆಚ್ಚಾಗ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಸರಿಯಾದ ಚಿಕಿತ್ಸೆ ದೊರಕದೇ ಸರ್ಕಾರಿ ಕೋವಿಡ್ ಸೆಂಟರ್ ಬಂದು ಗುಣಮುಖರಾದವರು ಕೂಡಾ ಇದ್ದು, ಸರ್ಕಾರಿ ಆಸ್ಪತ್ರೆಗಳ ಮೇಲೆ ನಂಬಿಕೆ ಹೆಚ್ಚಿಸಿದೆ
ಲಾಕ್ಡೌನ್ ಸಡಿಲಿಕೆಯಾದ ಮೇಲೆ ಹೊರರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇದರಿಂದಾಗಿ ಸಾಮಾಜಿಕ ಅಂತರ, ಸ್ವಚ್ಛತೆ ಕಾಪಾಡಿಕೊಳ್ಳೋದ್ರಿಂದ ಹಾಗೂ ಪೌಷ್ಟಿಕ ಆಹಾರ ಸೇವನೆ ಮಾಡೋದರಿಂದ ರೋಗಗಳನ್ನು ಹತೋಟಿಗೆ ತರಬಹುದಾಗಿದೆ ಅನ್ನೋದು ವೈದ್ಯರ ಅಭಿಮತವಾಗಿದೆ.