ಚಿಕ್ಕಬಳ್ಳಾಪುರ : ಬಾಗೇಪಲ್ಲಿ ಪಟ್ಟಣದ ಹೊಸ ಶಾದಿ ಮಹಲ್ ಆವರಣದಲ್ಲಿ ನಡೆದ ದಿನಸಿ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಮಳೆಯನ್ನು ಲೆಕ್ಕಿಸದೇ ಕಾಂಗ್ರೆಸ್ ನಾಯಕರು ಭಾಷಣ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಮಳೆಯಲ್ಲಿಯೆ ಭಾಷಣ ಮಾಡಿದರು. ಜನರು ಚೇರ್ಗಳನ್ನು ಎತ್ತಿ ಹಿಡಿದು ಭಾಷಣ ಕೇಳಿದ ಪ್ರಸಂಗ ನಡೆಯಿತು.
ಈ ವೇಳೆ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೊರೊನಾ ಎದುರಿಸಬೇಕೆಂದರೇ ವ್ಯಾಕ್ಸಿನೇಷನ್ ಹಾಕಿಸಿಕೊಳ್ಳಿ. ಎರಡು ಡೋಸ್ ಹಾಕಿಸಿ ಕೊಂಡ್ರೆ ಕೊರೊನಾ ಎದುರಿಸಬಹುದು. ಎಲ್ಲರೂ ಕಡ್ಡಾಯವಾಗಿ ವ್ಯಾಕ್ಸಿನೇಷನ್ ಹಾಕಿಸಿಕೊಳ್ಳಿ. ನಮಗಾಗಿ ಅಲ್ಲದಿದ್ರೂ ಸಮಾಜದ ದೃಷ್ಟಿಯಿಂದ ವ್ಯಾಕ್ಸಿನ್ ಹಾಕಿಸಿಕೊಳ್ಳಿ. 100 ಕೋಟಿ ಜನರಿಗೆ ವ್ಯಾಕ್ಸಿನ್ ಹಾಕಿದ್ರೆ ಮಾತ್ರ ಕೊರೊನಾ ಕಂಟ್ರೋಲ್ ಆಗುತ್ತದೆ ಎಂದರು.
ಮೋದಿ ಅವರು ದೇಶದ ಜನರಿಗೆ ಲಸಿಕೆ ನೀಡದೆ 6.5 ಕೋಟಿ ವ್ಯಾಕ್ಸಿನ್ ಬೇರೆ ದೇಶಕ್ಕೆ ಕೊಟ್ಟಿದ್ದಾರೆ. ಇತ್ತ ರಾಜ್ಯದಲ್ಲಿ ಯಡಿಯೂರಪ್ಪ ನಿದ್ದೇ ಮಾಡುತ್ತಿದ್ದಾರೆ. ವ್ಯಾಕ್ಸಿನೇಷನ್ ಕೊಡುವ ಕೆಲಸ ಮಾಡುತ್ತಿಲ್ಲ. ಬರೀ ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ. ಪೆಟ್ರೋಲ್, ಡೀಸೆಲ್, ಅಡುಗೆ ಎಣ್ಣೆ ಬೆಲೆ ಎಷ್ಟಾಯ್ತು ಹೇಳಿ ಮಿಸ್ಟರ್ ಮೋದಿ, ಯಡಿಯೂರಪ್ಪ ಎಂದು ವಾಗ್ದಾಳಿ ನಡೆಸಿದರು.
ಯಡಿಯೂರಪ್ಪ ಪರಿಹಾರ ಘೋಷಣೆ ಮಾಡಿದ್ದಾರೆ. ಆದರೆ, ಈವರೆಗೆ ಯಾರಿಗೂ ಪರಿಹಾರ ನೀಡುತ್ತಿಲ್ಲ. ಬಡವರಿಗೆ ₹10 ಸಾವಿರ ಕೊಡಿ ಎಂದಿದ್ದೆ. ಆದರೆ, ಯಡಿಯೂರಪ್ಪ ಜಪ್ಪಯ್ಯ ಎಂದರೂ ಕೊಡಲಿಲ್ಲ. ರಾಜ್ಯದಲ್ಲಿ ಇರೋದು ಮನುಷತ್ವ ಇಲ್ಲದ, ರಾಕ್ಷಸ ಸರ್ಕಾರ. ಬಿಜೆಪಿ ಸರ್ಕಾರ ಜೆಸಿಬಿ ತೆಗೆದುಕೊಂಡು ಹಣವನ್ನ ಲೂಟಿ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ : ಟೋಕಿಯೊ ಒಲಿಂಪಿಕ್ಸ್: ಮೂಡಬಿದಿರೆ ಆಳ್ವಾಸ್ ಕಾಲೇಜಿನ ಇಬ್ಬರು ಕ್ರೀಡಾಪಟುಗಳು ಆಯ್ಕೆ