ಚಿಕ್ಕಬಳ್ಳಾಪುರ: ಕಲ್ಲಿನ ಕ್ವಾರಿಯಲ್ಲಿ ದಿನಕೂಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ದಿಢೀರ್ ಆಗಿ ಕೋಟಿ ರೂಪಾಯಿ ಮೌಲ್ಯದ ಆಸ್ತಿಯ ಒಡೆಯನಾಗಿದ್ದಾನೆ. ಇದೀಗ ಈ ಕೋಟ್ಯಾಧಿಪತಿಯನ್ನು ಬಾಗೇಪಲ್ಲಿ ಪೊಲೀಸರು ಬಂಧಿಸಿದ್ದು, ಆತನ ಅಕ್ರಮ ಸಂಪಾದನೆಯ ಹಾದಿಯನ್ನು ಪತ್ತೆ ಮಾಡಿದ್ದಾರೆ. ಮೂಲತಃ ಆಂಧ್ರಪ್ರದೇಶದ ಲೇಪಾಕ್ಷಿ ಮೂಲದ ಈತ ಕೂಲಿ ಕೆಲಸಕ್ಕೆಂದು ಬಾಗೇಪಲ್ಲಿಗೆ ಬಂದಿದ್ದ.
ಕೂಲಿ ಕೆಲಸ ಮಾಡ್ತಿದ್ದ ಕೋಟೇಶ್ವರರಾವ್ ಬಾಗೇಪಲ್ಲಿ ಪಟ್ಟಣದ 5ನೇ ವಾರ್ಡಿನಲ್ಲಿ ಎರಡು ಬೃಹತ್ ಕಟ್ಟಡ ಹಾಗೂ ಬಾಗೇಪಲ್ಲಿ ತಾಲೂಕಿನ ಕಾರಕೂರು ಕ್ರಾಸ್ ಬಳಿ ಕೋಟಿ ರೂಪಾಯಿ ಕೊಟ್ಟು ಜಮೀನು ಖರೀದಿಸಿದ್ದಾನೆ. ಇದು ಸಾಲದು ಎಂಬಂತೆ ಬೃಹತ್ ಕಲ್ಯಾಣ ಮಂಟಪವನ್ನು ಸಹ ನಿರ್ಮಿಸುತ್ತಿದ್ದಾನೆ.
ಏನು ಅಕ್ರಮ?: ಕೂಲಿ ಕೆಲಸಕ್ಕೆಂದು ಆಂಧ್ರದಿಂದ ಕರ್ನಾಟಕಕ್ಕೆ ಕೋಟೇಶ್ವರರಾವ್ ಬಂದಿದ್ದ. ಕೆಲಸದ ಜೊತೆಗೆ ಗಣಿ ಹಾಗೂ ಭೂ ವಿಜ್ಞಾನ ಇಲಾಖೆಯ ನಕಲಿ ಗಣಿ ಪರ್ಮಿಟ್ಸ್ ಮತ್ತು ಲೈಸೆನ್ಸ್ ತಯಾರಿ ಮಾಡುವುದನ್ನು ಕರಗತ ಮಾಡಿಕೊಂಡಿದ್ದಾನೆ. ಕದ್ದು ಮುಚ್ಚಿ ಸುಮಾರು 10 ವರ್ಷಗಳಿಂದ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳ ಗಣಿ ಇಲಾಖೆಯ ನಕಲಿ ಪರವಾನಿಗೆ ಹಾಗೂ ಪರ್ಮಿಟ್ಸ್‌ಅನ್ನ ಸೃಷ್ಟಿಸಿ ಮೂರು ರಾಜ್ಯಗಳಿಗೆ ವಂಚನೆ ಮಾಡ್ತಿದ್ದ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ನಾಯಿ ತಪ್ಪಿಸಲು ಹೋಗಿ ಬೈಕ್ ಪಲ್ಟಿ.. ಸವಾರನ ಜೀವ ಉಳಿಸಿತು ಹೆಲ್ಮೆಟ್!
ಬಾಗೇಪಲ್ಲಿ ಪೊಲೀಸರು ಖಚಿತ ಮಾಹಿತಿ ಮೇರೆಗೆ ಇವನ ಮನೆ ಮೇಲೆ ದಾಳಿ ನಡೆಸಿ, ಅಕ್ರಮವಾಗಿ ತಯಾರಿಸಿದ್ದ ನಕಲಿ ಪರವಾನಿಗೆ ಮತ್ತು ಪರ್ಮಿಟ್ಸ್ ಪತ್ರಗಳು ಹಾಗೂ ತಯಾರಿಗೆ ಬಳಸಲಾಗುತ್ತಿದ್ದ ಕಂಪ್ಯೂಟರ್, ಪ್ರಿಂಟರ್, ಹಾಲೋಗ್ರಾಂ ತಯಾರಿಕಾ ಯಂತ್ರವನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಹತ್ತಕ್ಕೂ ಹೆಚ್ಚು ವರ್ಷಗಳಿಂದಲೂ ಕೋಟೇಶ್ವರರಾವ್ ಗಣಿ ಇಲಾಖೆಯ ನಕಲಿ ಪರವಾನಿಗೆ ಪರ್ಮಿಟ್ಸ್ ಸೃಷ್ಟಿ ಮಾಡುತ್ತಿದ್ರೂ, ಎಲ್ಲಿಯೂ ಸಿಕ್ಕಿ ಹಾಕಿಕೊಂಡಿರಲಿಲ್ಲ. ಆದ್ರೆ ಈಗ ಬಾಗೇಪಲ್ಲಿ ಪೊಲೀಸರು ಈ ಖತರ್ನಾಕ್ ಖದೀಮನನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.