ಚಿಕ್ಕಬಳ್ಳಾಪುರ: ಶಾಲೆಗೆ ಹೋಗಿರುವ 16 ವರ್ಷದ ಬಾಲಕಿ ಕೆರೆ ನೀರಿನಲ್ಲಿ ಅನುಮಾನಾಸ್ಪದವಾಗಿ ಶವವಾಗಿ ಪತ್ತೆಯಾಗಿರುವ ಘಟನೆ ಬಾಗೇಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಾಗೇಪಲ್ಲಿ ಪಟ್ಟಣದ ಹೊರವಲಯದಲ್ಲಿರುವ ಕೊಂಡಂವಾರಪಲ್ಲಿ ಗ್ರಾಮದ ಕೆರೆ ನೀರಿನಲ್ಲಿ ವಿದ್ಯಾರ್ಥಿನಿಯ ಮೃತದೇಹ ಪತ್ತೆಯಾಗಿದೆ.
ಘಟನಾ ಸ್ಥಳದಲ್ಲಿ ಮೃತ ವಿದ್ಯಾರ್ಥಿನಿಯ ಸ್ಕೂಲ್ ಬ್ಯಾಗ್, ಶೂ, ಪುಸ್ತಕಗಳು ಹಾಗೂ ಆಧಾರ್ ಕಾರ್ಡ್ ಸಿಕ್ಕಿವೆ. ಸ್ಥಳದಲ್ಲಿ ದೊರೆತ ದಾಖಲೆಗಳ ಪ್ರಕಾರ ಮೃತ ವಿದ್ಯಾರ್ಥಿನಿ ಚಿಕ್ಕಬಳ್ಳಾಪುರ ತಾಲೂಕಿನ ಈರೇನಹಳ್ಳಿ ಗ್ರಾಮದ ಶಂಕರ ಎಂಬುವವರ ಮಗಳು ಎಂದು ಶಾಲಾ ಬ್ಯಾಗ್ನಲ್ಲಿ ದೊರೆತ ದಾಖಲೆಗಳಿಂದ ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಬಾಗೇಪಲ್ಲಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ವಿದ್ಯಾರ್ಥಿನಿ ಸಾವಿಗೆ ಖಚಿತ ಕಾರಣ ತಿಳಿದು ಬಂದಿಲ್ಲ ಎನ್ನಲಾಗಿದೆ.
ಚಿಕ್ಕಬಳ್ಳಾಪುರದ ಖಾಸಗಿ ಶಾಲೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿನಿ ವ್ಯಾಸಂಗ ಮಾಡುತ್ತಿದ್ದಳು. ಶಂಕರ ಮತ್ತು ನಾಗಮ್ಮ ದಂಪತಿಯ ಒಬ್ಬಳೇ ಮಗಳಾಗಿದ್ದು, ಶನಿವಾರ ಬೆಳಗ್ಗೆ ಶಾಲೆಗೆಂದು ಹೋಗಿದ್ದಳು. ಬಳಿಕ ಕೊಂಡವಾರಪಲ್ಲಿ ಗ್ರಾಮದ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ರಾತ್ರಿ ನಾಪತ್ತೆಯಾಗಿದ್ದ ಯುವತಿಯ ಮೃತದೇಹ ಬೆಳಗ್ಗೆ ಮನೆ ಮುಂದೆ ಪತ್ತೆ
ಬೆಂಗಳೂರಲ್ಲಿ ನಾಪತ್ತೆಯಾಗಿದ್ದ ಯುವತಿ ಶವವಾಗಿ ಪತ್ತೆ: ಬೆಂಗಳೂರಿನ ಮಹಾದೇವಪುರ ಠಾಣಾ ವ್ಯಾಪ್ತಿಯ ಮಹೇಶ್ವರಿ ನಗರದಲ್ಲಿ ನಾಪತ್ತೆಯಾಗಿದ್ದ ಯುವತಿ ಶವವಾಗಿ ಕಳೆದ ತಿಂಗಳು ಪತ್ತೆಯಾಗಿದ್ದಳು. ಮಹಾನಂದ (21) ಎಂಬ ಯುವತಿಯ ಶವ ಮನೆಯ ಬಳಿಯೇ ಪತ್ತೆಯಾಗಿತ್ತು. ಪೊಲೀಸರು ಈ ಬಗ್ಗೆ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.
ಕಲಬುರಗಿ ಮೂಲದ ಮಹಾನಂದ ಅವರು ತಮ್ಮ ಅಕ್ಕ ಜೊತೆ ಕಳೆದ ಮೂರು ವರ್ಷಗಳಿಂದ ಮಹೇಶ್ವರಿ ಲೇಔಟ್ನಲ್ಲಿ ವಾಸವಾಗಿದ್ದರು. ಪೆಟ್ರೋಲ್ ಬಂಕ್ನಲ್ಲಿ ಕೆಲಸ ಮಾಡುತ್ತಿದ್ದರು. ಮಹಾನಂದ ಕಾಣೆಯಾದ ಬಗ್ಗೆ ಮಹಾದೇವಪುರ ಠಾಣೆಯಲ್ಲಿ ಅವರ ಅಕ್ಕ ದೂರು ದೂರು ನೀಡಿದ್ದರು. ಆ ಬಳಿಕ ಮನೆ ಮುಂದೆ ಯುವತಿಯ ಶವ ಪತ್ತೆಯಾಗಿತ್ತು.
ಮೇಲ್ನೋಟಕ್ಕೆ ಅಸಹಜ ಸಾವು ಎಂದು ಪೊಲೀಸರು ಶಂಕಿಸಿದ್ದರು. ಶವದ ಮೇಲೆ ಯಾವುದೇ ಗುರುತುಗಳಿಲ್ಲದ ಹಿನ್ನೆಲೆಯಲ್ಲಿ ಉಸಿರುಗಟ್ಟಿಸಿ ಹತ್ಯೆ ಮಾಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಸದ್ಯ ಯಾವುದೇ ಸಾಕ್ಷಿಗಳು ಸಿಕ್ಕಿಲ್ಲ. ಸೆಕ್ಷನ್ 302 ಅಡಿ ಈ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಕೈಗೊಳ್ಳುವುದಾಗಿ ಡಿಸಿಪಿ ಎಸ್. ಗಿರೀಶ್ ಮಾಹಿತಿ ನೀಡಿದ್ದರು.