ಚಿಕ್ಕಬಳ್ಳಾಪುರ: ನಿಗದಿತ ಕಾಲಮಿತಿಯೊಳಗೆ ಸಾರ್ವಜನಿಕ ಅರ್ಜಿಗಳನ್ನು ವಿಲೇವಾರಿ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ 'ಸಕಾಲ' ಯೋಜನೆಯ ಅಕ್ಟೋಬರ್ ತಿಂಗಳ ಪ್ರಗತಿಯ ಅಂಕಿ ಅಂಶಗಳನ್ನು ಸರ್ಕಾರ ಬಿಡುಗಡೆ ಮಾಡಿದ್ದು, ಅಕ್ಟೋಬರ್ ತಿಂಗಳಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಆಯುರ್ವೇದ ದಿನಾಚರಣೆಯ ನಂತರ ಈ ಕುರಿತು ಸುದ್ದಿಗಾರರಿಗೆ ಅವರು ಮಾಹಿತಿ ನೀಡಿದ್ರು. ಜಿಲ್ಲೆಯಲ್ಲಿ ಅಕ್ಟೋಬರ್ ತಿಂಗಳಲ್ಲಿ ಒಟ್ಟು 65,828 ಅರ್ಜಿಗಳನ್ನು ಸಕಾಲ ಯೋಜನೆಯಡಿ ಸ್ವೀಕರಿಸಲಾಗಿದೆ. ಈ ಪೈಕಿ 63,713 ಅರ್ಜಿಗಳನ್ನು ಸಕಾಲ ನಿಯಮಗಳನ್ವಯ ನಿಗದಿತ ಕಾಲಮಿತಿಯೊಳಗೆ ವಿಲೇವಾರಿ ಮಾಡಲಾಗಿದೆ. 4,824 ಅರ್ಜಿಗಳು ಸೂಕ್ತ ದಾಖಲೆಗಳಿಲ್ಲದ ಕಾರಣ ತಿರಸ್ಕೃತಗೊಂಡಿವೆ. 2,633 ಅರ್ಜಿಗಳು ವಿಲೇವಾರಿಯಾಗುವುದು ಬಾಕಿಯಿದೆ. ನಿಗದಿತ ಕಾಲಮಿತಿಯೊಳಗೆ ಅರ್ಜಿಗಳು ವಿಲೇವಾರಿಯಾಗುವುದರಿಂದ ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಪದೇ ಪದೆ ಅಲೆಯುವುದು ತಪ್ಪುತ್ತದೆ. ಜೊತೆಗೆ ಆಡಳಿತವೂ ಪಾರದರ್ಶಕವಾಗಿ ನಡೆಯಲು ಈ ಯೋಜನೆ ಸಹಕಾರಿಯಾಗಿದೆ. ಸಕಾಲ ಯೋಜನೆ ಪ್ರಗತಿಯ ಅಕ್ಟೋಬರ್ನಲ್ಲಿ ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದುಕೊಂಡಿರುವುದು ಸಂತಸ ತಂದಿದೆ ಎಂದರು.
'ಸಕಾಲ'ಯೋಜನೆಯ ಅನುಷ್ಠಾನದಲ್ಲಿ ಜಿಲ್ಲೆ ಯಾವಾಗಲೂ ಮುಂಚೂಣಿಯಲ್ಲಿದ್ದು, ಸಕಾಲ ಯೋಜನೆಯಲ್ಲಿ ಜಿಲ್ಲೆಯು 2019ರ ಸೆಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿತ್ತು. ಅದೇ ವರ್ಷದ ನವೆಂಬರ್‌ನಲ್ಲಿ ಎರಡನೇ ಸ್ಥಾನ ಪಡೆದಿತ್ತು. 2020ರ ಡಿಸೆಂಬರ್‌ನಲ್ಲಿ ಸಕಾಲ ಯೋಜನೆಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿದ್ದು, ನವೆಂಬರ್‌ನಲ್ಲಿ 2ನೇ ಸ್ಥಾನ ಗಳಿಸಿತ್ತು. ಜನವರಿ ಮತ್ತು ಅಕ್ಟೋಬರ್ನಲ್ಲಿ ಮೂರನೇ ಸ್ಥಾನ ಗಳಿಸಿತ್ತು ಹಾಗೂ 2021 ರ ಫೆಬ್ರವರಿಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿದ್ದು ಜನವರಿಯಲ್ಲಿ 2ನೇ ಸ್ಥಾನ ಗಳಿಸಿತ್ತು.ಮಾರ್ಚ್ನಲ್ಲಿ 3ನೇ ಸ್ಥಾನ ಗಳಿಸಿತ್ತು. ಕಳೆದ ಅಕ್ಟೋಬರ್ ತಿಂಗಳಲ್ಲಿಯೂ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿ ಜಿಲ್ಲೆಯು ಕೀರ್ತಿ ಗಳಿಸಲು ಕಾರಣರಾದ ಜಿಲ್ಲಾಡಳಿತದ ಎಲ್ಲಾ ಇಲಾಖೆಗಳ ಅಧಿಕಾರಿ/ಸಿಬ್ಬಂದಿಗೆ ಜಿಲ್ಲಾಧಿಕಾರಿಯವರು ಅಭಿನಂದನೆ ತಿಳಿಸಿದರು.