ಚಿಕ್ಕಬಳ್ಳಾಪುರ: ಮದೀನಾ ಯಾತ್ರೆಗೆ ಕರೆದುಕೊಂಡು ಹೋಗುವುದಾಗಿ ಹೇಳಿ ಜನರಿಂದ ಹಣ ತೆಗೆದುಕೊಂಡು ಮೋಸ ಮಾಡಿದ್ದ ವ್ಯಕ್ತಿಯನ್ನು ಚಿಂತಾಮಣಿ ನಗರದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಹೆಚ್.ಬಿ.ಆರ್ ಬಡಾವಣೆಯ ಮದೀನಾ ಮುನಾವರ್ ಇಂಟರ್ ನ್ಯಾಷನಲ್ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ಕಂಪನಿಯ ಮಾಲೀಕ ಸೈಯದ್ ಸಫೀರ್ ಅಹಮದ್ ಎಂಬುವವನನ್ನು ನಗರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿ ಹಾಗೂ ಇತರೆ ಮೂವರು ಸೇರಿಕೊಂಡು ಮೆಕ್ಕಾ ಮದೀನಾ ಯಾತ್ರೆಗೆ ಹೋಗಿ ಬರಲು ಡಿಸೆಂಬರ್ 2019 ರಲ್ಲಿ ಒಬ್ಬರಿಗೆ ರೂ.34,949 ಫಿಕ್ಸ್ ಮಾಡಿ ಇದರ ಏಜೆಂಟ್ರಿಗೆ 2 ಸಾವಿರ ಕಮಿಷನ್ ನೀಡುವುದಾಗಿ ತಿಳಿಸಿದ್ದರು. ಅದರಂತೆ 2019 ಮಾರ್ಚ್ 15 ರಂದು ಜನರಿಂದ ಸುಮಾರು 13,86,100 ರೂಗಳನ್ನು ಹಾಗೂ 2019 ಏಪ್ರಿಲ್ 10 ರಂದು ₹3,63,850 ಸೇರಿ ಒಟ್ಟು 17,49,950 ತೆಗೆದುಕೊಂಡು ವಂಚಿಸಿದ್ದಾರೆ. ಈ ಬಗ್ಗೆ ಕೆ.ಆರ್.ಬಡಾವಣೆಯ ವಾಜೀದ್ ಬೇಗ್ ಎಂಬುವವರು ದೂರು ನೀಡಿದ್ದರು.
ಮೊದಲಿಗೆ ಹಣ ಕಟ್ಟಿದ್ದ 50 ಜನ ಯಾತ್ರಾರ್ಥಿಗಳು ಮೂಲ ಪಾಸ್ ಪೋರ್ಟ್ ತೆಗೆದುಕೊಂಡು ನವೆಂಬರ್ ಮಾಹೆಯಲ್ಲಿ ಕಚೇರಿಗೆ ಬರಬೇಕು ಎಂದು ತಿಳಿಸಿದ್ದರು. ನವೆಂಬರ್ ಮಾಹೆಯಲ್ಲಿ 50 ಜನರು ಹೋದಾಗ, ಆರೋಪಿಗಳ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ಕಂಪನಿಯ ಕಚೇರಿಗೆ ಬೀಗ ಹಾಕಲಾಗಿತ್ತು. ಅನೇಕ ಬಾರಿ ಕಚೇರಿಗೆ ಅಲೆದಾಡಿ ದೂರವಾಣಿ ಕರೆ ಮಾಡಿದರೂ ಸ್ವೀಕರಿಸಲಿಲ್ಲ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಫೆಬ್ರವರಿ 18 ರಂದು ದೂರು ದಾಖಲಿಸಿಕೊಂಡಿದ್ದ ಪೊಲೀಸರು ತಲೆಮರೆಸಿಕೊಂಡಿದ್ದ ಆರೋಪಿಯ ಪತ್ತೆಗಾಗಿ ಬಲೆಬೀಸಿದ್ದರು. ಮೊದಲನೆಯ ಆರೋಪಿ ಸೈಯದ್ ಸಫೀರ್ ಎಂಬುವನನ್ನು ಬಂಧಿಸಿ ಕೋರ್ಟ್ಗೆ ಹಾಜರುಪಡಿಸಲಾಗಿದೆ.