ಚಿಕ್ಕಬಳ್ಳಾಪುರ: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಿಕೀಯ ನಾಯಕರ ಕೆಸರೆರಚಾಟಗಳು ಶುರುವಾಗಿವೆ.
ಬಾಗೇಪಲ್ಲಿ ತಾಲೂಕಿನ ಕೊತ್ತಕೋಟ ಗ್ರಾಮದ ಖಾಸಗಿ ತೋಟವೊಂದರಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ಕಾರ್ಯಾಗಾರವನ್ನ ಏರ್ಪಡಿಸಲಾಗಿತ್ತು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಆಕಾಂಕ್ಷಿ ಮಾಜಿ ಸಚಿವ ಬಿ.ಎನ್. ಬಚ್ಚೇಗೌಡ ಪರ ಪ್ರಚಾರ ಉದ್ದೇಶದಿಂದ ಬಾಗೇಪಲ್ಲಿ ವಿದಾನಸಭಾಕ್ಷೇತ್ರದ ಬಿಜೆಪಿ ಮಹಿಳಾ ಕಾರ್ಯಕರ್ತರ ಸಮಾವೇಶದಲ್ಲಿ ಮಹಿಳಾ ಕಾರ್ಯಕರ್ತರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯಲಹಂಕ ಬಿಜೆಪಿ ಶಾಸಕ ವಿಶ್ವನಾಥ್ ಮಾತನಾಡಿ, ಚಿಕ್ಕಬಳ್ಳಾಪುರ ಸಂಸದ ವೀರಪ್ಪ ಮೊಯ್ಲಿ ಕ್ಷೇತ್ರದಲ್ಲಿ ಬರೀ ಸುಳ್ಳನ್ನೇ ಹೇಳಿಕೊಂಡು ಎರಡು ಬಾರಿ ಗೆದ್ದಿದ್ದಾರೆ. ಸುಳ್ಳೇ ಅವರ ಮನೆ ದೇವರು ಎಂದು ಮೊಯ್ಲಿ ವಿರುದ್ಧ ಟೀಕಿಸಿದರು.
ಇನ್ನು ಸುಮಲತಾ ಅಂಬರೀಶ್ ಬಿಜೆಪಿಗೆ ಬರುವ ಸುಳಿವು ನೀಡಿದ ಶಾಸಕ ವಿಶ್ವನಾಥ್, ಸುಮಲತಾರನ್ನು ಮಂಡ್ಯ ಬಿಜೆಪಿ ಅಭ್ಯರ್ಥಿಯನ್ನಾಗಿ ಮಾಡುವ ಎಲ್ಲಾ ಪ್ರಯತ್ನ ನಡೀತಿದೆ. ಇದೇ ತಿಂಗಳು 18ನೇ ತಾರೀಖಿನವರೆಗೆ ಸುಮಲತಾ ಅವರು ಸಮಯ ತೆಗೆದುಕೊಂಡಿದ್ದು, ಬಿಜೆಪಿ ನಾಯಕರು ಸುಮಲತಾರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಈ ವಿಚಾರದಲ್ಲಿ ಬಿಜೆಪಿ ನಾಯಕರು ಯಾವ ರೀತಿ ತೀರ್ಮಾನ ತೆಗೆದುಕೊಳ್ಳುತ್ತಾರೊ ಅದಕ್ಕೆ ನಾವು ಬದ್ಧರಾಗಿದ್ದೇವೆ ಎಂದರು.