ಚಿಕ್ಕಬಳ್ಳಾಪುರ: ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ವಿರೋಧ ಪಕ್ಷಗಳಿಗೆ ಶಕ್ತಿ ಪ್ರದರ್ಶನ ತೋರಿಸಲು ಅಪಾರ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಕೆ ಸಲ್ಲಿಸಿದ್ದು, ಡಿಸಿಎಂ ಅಶ್ವತ್ಥ ನಾರಾಯಣ, ಸಚಿವ ಸಿ.ಟಿ.ರವಿ ಸಾಥ್ ನೀಡಿದರು.
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು ತಮ್ಮಅಭ್ಯರ್ಥಿಗಳ ಪರ ಪ್ರಚಾರ ಮಾಡಲು ಬಂದಿದ್ದಾರೆ. ಅದಕ್ಕೆ ಯಾವುದೇ ಅರ್ಥ ಕಲ್ಪಿಸುವುದು ಸರಿಯಿಲ್ಲ. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸುಧಾಕರ್ ಶಕ್ತಿ, ಜನರ ಆಶೀರ್ವಾದ ಇದೆ. ಇವೆಲ್ಲ ನನ್ನ ಗೆಲುವಿಗೆ ಕಾರಣವಾಗಲಿದೆ ಎಂದು ಸುಧಾಕರ್ ತಿಳಿಸಿದರು.
ಕ್ಷೇತ್ರಕ್ಕೆ ನೀರಾವರಿ ಯೋಜನೆಗಳು ಬಹಳ ಮುಖ್ಯ. ಎತ್ತಿನಹೊಳೆ ಯೋಜನೆ ತರುತ್ತೇವೆಂದು ಬಾಯಿ ಮಾತಿನಲ್ಲಿ ಹೇಳುತ್ತಾರೆ. ಆದರೆ, ಅದು ಸಾಧ್ಯವಾಗುವುದಿಲ್ಲ. ಬಿಜೆಪಿ ಸರ್ಕಾರ ಮಾತುಕೊಟ್ಟಿದೆ. ಇನ್ನೂ ಮೂರೂವರೆ ವರ್ಷದಲ್ಲಿ ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ತುಮಕೂರು ಜಿಲ್ಲೆಗಳಿಗೆ ಎತ್ತಿನಹೊಳೆ ನೀರು ಬರಲಿದೆ ಎಂದು ಭರವಸೆ ನೀಡಿದರು.
ಬೆಂಬಲಿಗರನ್ನು ತೆಲುಗಿನಲ್ಲಿ ಹುರಿದುಂಬಿಸಿದ ಸುಧಾಕರ್, ನನ್ನ ಪ್ರಾಣ ಹೋಗುವಷ್ಟರಲ್ಲಿ ನಿಮ್ಮ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.
ಮೈತ್ರಿ ಸರ್ಕಾರದಲ್ಲಿ ಮಾನವೀಯತೆ ಸತ್ತು ಹೋಗಿತ್ತು. ಮೆಡಿಕಲ್ ಕಾಲೇಜು ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಕೇಳಿಕೊಂಡರೂ ಈಡೇರಿಸಲಿಲ್ಲ. ಈ ಕಾರಣಕ್ಕಾಗಿಯೇ 16 ಶಾಸಕರೂ ರಾಜೀನಾಮೆ ಕೊಟ್ಟೆವು. ಕಾಂಗ್ರೆಸ್ ಮುಖಂಡರು ಕುತಂತ್ರರು. ರಾಜಿನಾಮೆ ಕೊಟ್ಟರೇ ನಮ್ಮನ್ನು ಅನರ್ಹರನ್ನಾಗಿ ಮಾಡಿದರು. 125 ದಿನ ನರಕಯಾತನೆ ಅನುಭವಿಸಿದ್ದೇನೆ. ಯಾವುದೇ ಕಾರಣಕ್ಕೂ ಕುಟುಂಬ ರಾಜಕಾರಣ ಮಾಡಲ್ಲ ಎಂದು ಕುಮಾರಸ್ವಾಮಿಗೆ ಟಾಂಗ್ ಕೊಟ್ಟರು.
ಅರ್ಹರೋ ಅನರ್ಹರೋ ನೀವೇ ತೀರ್ಮಾನ ಮಾಡಿಕೊಳ್ಳಿ ಎಂದು ನ್ಯಾಯಾಲಯ ಜನಾಭಿಪ್ರಾಯಕ್ಕೆ ಕೊಟ್ಟಿದೆ. ಅದು ಚುನಾವಣೆಯ ನಂತರ ತಿಳಿಯಲಿದೆ ಎಂದು ತಿಳಿಸಿದರು.
ಧರ್ಮ, ಅಧರ್ಮಕ್ಕೆ ಯುದ್ಧ: ಕೈ ಪ್ರಚಾರದ ಸಂದರ್ಭದಲ್ಲಿ ಧರ್ಮ ಹಾಗೂ ಅಧರ್ಮದ ನಡುವೆ ಯುದ್ದ ನಡೆಯಲಿದೆ ಎಂದು ಮಾಜಿ ಸಚಿವ ಕೃಷ್ಣಬೈರೇಗೌಡ ಅವರು ಸುಧಾಕರ್ಗೆ ಟಾಂಗ್ ಕೊಟ್ಟಿದ್ದಾರೆ. ಧರ್ಮ ಅಧರ್ಮದ ಬಗ್ಗೆ ಅವರಿಗೆ ಹೇಳಿಕೊಡಬೇಕಿದೆ ಎಂದಿದ್ದಾರೆ.