ಬಾಗೇಪಲ್ಲಿ(ಚಿಕ್ಕಬಳ್ಳಾಪುರ): ನಿನ್ನೆ ಸುರಿದ ಮಳೆಗೆ ಪಟ್ಟಣದ ಪೊಲೀಸ್ ವಸತಿ ಗೃಹದಲ್ಲಿನ ಮೂರು ಅಂತಸ್ತಿನ ಮಹಡಿ ಮನೆಯ ಬಾಲ್ಕನಿ ಗೋಡೆ ಕುಸಿದಿದೆ. ಈ ಸಂಬಂಧ ಸ್ಥಳಕ್ಕೆ ಸರ್ಕಲ್ ಇನ್ಸ್ಪೆಕ್ಟರ್ ನಾಗರಾಜ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.
2007 ರಲ್ಲಿ ನಾಲ್ಕು ಬ್ಲಾಕ್‌ಗಳಲ್ಲಿ ಸುಮಾರು 20 ಮನೆಗಳನ್ನು ನಿರ್ಮಾಣ ಮಾಡಲಾಗಿತ್ತು. ಈ ವಸತಿ ಗೃಹಗಳ ಪೈಕಿ ಆರು ಮನೆಗಳು ಸುಸ್ಥಿತಿಯಲ್ಲಿ ಇರಲಿಲ್ಲ. ಮಳೆ ಬಿದ್ದಾಗ ಎರಡು ಮತ್ತು ಮೂರನೇ ಮಹಡಿಯಲ್ಲಿನ ಮೇಲ್ಛಾವಣಿ ಸೋರುತ್ತಿತ್ತು. ಈ ಹಿನ್ನೆಲೆ ಸತತವಾಗಿ ಸೋರಿಕೆಯುಂಟಾದ ಕಾರಣದಿಂದ ಎರಡು ಮತ್ತು ಮೂರು ಅಂತಸ್ತಿನ ಮಹಡಿಯ ಬಾಲ್ಕನಿ ಗೋಡೆ ಕುಸಿದಿವೆ.
ಈ ವಸತಿ ಗೃಹಗಳಲ್ಲಿರುವ ಎಲ್ಲಾ ಕುಟುಂಬಗಳು ಈ ಸಂಬಂಧ ಖಾಲಿ ಮಾಡಿ ಬೇರೆ ಮನೆಯಲ್ಲಿ ವಾಸ ಮಾಡಲು ಮುಂದಾಗಿದ್ದಾರೆ. ಕೇವಲ 14 ವರ್ಷಗಳ ಹಿಂದೆಯಷ್ಷೇ ನಿರ್ಮಿಸಲಾಗಿದ್ದ ಕಟ್ಟಡಗಳು ಈಗಾಗಲೇ ಶಿಥಿಲಾವಸ್ಥೆ ತಲುಪಿರುವುದು ದುರಾದೃಷ್ಟಕರ.