ಚಿಕ್ಕಬಳ್ಳಾಪುರ : ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದ ತಂದೆ ಮಗನನ್ನು ಪೊಲೀಸರು ರೆಡ್‌ಹ್ಯಾಂಡ್ ಆಗಿ ಹಿಡಿದು ಬಂಧಿಸಿದ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕಟ್ಟಿಗೇನಹಳ್ಳಿ ಕ್ರಾಸ್ ಬಳಿ ನಡೆದಿದೆ.
ಕಟ್ಟಿಗೇನಹಳ್ಳಿ ಗ್ರಾಮದ ಗೋಪಾಲಪ್ಪ ಮತ್ತು ಆತನ ಮಗ ಮಂಜುನಾಥ್ ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ. ಆರೋಪಿಗಳು ತಮ್ಮ ದ್ವಿಚಕ್ರವಾಹನದಲ್ಲಿ ಗಾಂಜಾ ಮಾರಾಟ ಮಾಡಲು ಹೋಗುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ವೃತ್ತ ನಿರೀಕ್ಷಕ ಪುರುಷೋತ್ತಮರಾವ್ ಹಾಗೂ ಸಿಬ್ಬಂದಿ ಕೆ. ಬಿ ಶಿವಪ್ಪ, ಶಿವಣ್ಣ, ಚಂದ್ರಶೇಖರ್, ಮಂಜುನಾಥ್ ಕೂಡಲೇ ಕಾರ್ಯಾಚರಣೆ ನಡೆಸಿ ಕಟ್ಟಿಗೇನಹಳ್ಳಿ ಕ್ರಾಸ್ ಬಳಿ ದ್ವಿಚಕ್ರವಾಹನವನ್ನು ತಡೆದು ಪರಿಶೀಲಿಸಿದ್ದಾರೆ. ಆಗ ಬ್ಯಾಗ್ನಲ್ಲಿ ಗಾಂಜಾ ಪತ್ತೆಯಾಗಿದೆ.
ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನೆರೆಯ ಆಂಧ್ರಪ್ರದೇಶದ ಬಿ. ಕೊತ್ತಕೋಟೆ ಬಳಿಯ ಪಡಿಕಾಯಲಪಲ್ಲಿ ಗ್ರಾಮದ ನಾಗರಾಜ್ ಎಂಬುವರಿಂದ ಗಾಂಜಾವನ್ನು ತೆಗೆದುಕೊಂಡು ಬಂದಿದ್ದು, ಚಿಂತಾಮಣಿಯಲ್ಲಿ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದಾರೆ.
ಪೊಲೀಸರು ಆರೋಪಿಗಳಿಂದ 1 ಕೆಜಿ ಗಾಂಜಾ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಡಿವೈಎಸ್ಪಿ ಎಸ್ ಟಿ ಚಂದ್ರಶೇಖರ್ ಸ್ಥಳಕ್ಕೆ ಭೇಟಿ ನೀಡಿ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಓದಿ: ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ