ಚಿಕ್ಕಬಳ್ಳಾಪುರ: ಸಿಸಿ ಕ್ಯಾಮೆರಾಗಳಿಗೆ ಪೇಯಿಂಟ್ ಸ್ಪ್ರೇ ಮಾಡಿ ಎಟಿಎಂನಲ್ಲಿದ್ದ 13 ಲಕ್ಷ ರೂ ದೋಚಿ ಕಳ್ಳರು ಪರಾರಿಯಾಗಿರುವ ಘಟನೆ ನಗರದ ಹೃದಯ ಭಾಗದಲ್ಲಿರುವ ಶಿಡ್ಲಘಟ್ಟ ಸರ್ಕಲ್ ಬಳಿ ನಡೆದಿದೆ.
ನಗರದ ಶಿಡ್ಲಘಟ್ಟ ರಸ್ತೆಯ ಸೈಂಟ್ ಜೋಸೆಫ್ ಕಾನ್ವೆಂಟ್ ಶಾಲೆ ಬಳಿಯಿರುವ ಆಕ್ಸಿಸ್ ಬ್ಯಾಂಕ್ ಎಟಿಎಂಗೆ ನುಗ್ಗಿದ ಕಳ್ಳರು ಸಿಸಿ ಕ್ಯಾಮರಾಗಳಿಗೆ ಪೇಯಿಂಟ್ ಸ್ಪ್ರೇ ಮಾಡಿ ಗ್ಯಾಸ್ ಕಟರ್ನಿಂದ ಎಟಿಎಂ ಮೆಷಿನ್ ಕಟ್ ಮಾಡಿ ಅಪಾರ ಪ್ರಮಾಣದ ಹಣ ದೋಚಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಸಿಬ್ಬಂದಿ ಎಟಿಎಂಗೆ ಹಣ ತುಂಬಲು ಬಂದಾಗ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಇನ್ನೂ ಬ್ಯಾಂಕ್ ಸಿಬ್ಬಂದಿ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು ಸ್ಥಳಕ್ಕೆ ಡಿವೈಎಸ್ಪಿ ರವಿಶಂಕರ್ ಹಾಗೂ ಶ್ವಾನದಳ ಮತ್ತು ಬೆರಳಚ್ಚು ತಜ್ಙರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.