ಗುಡಿಬಂಡೆ: ಪಟ್ಟಣದ ಹೃದಯ ಭಾಗದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂ ಸುಮಾರು 4 ತಿಂಗಳುಗಳಿಂದ ಮುಚ್ಚಿದ್ದು, ಬ್ಯಾಂಕ್ ಗ್ರಾಹಕರೂ ಸೇರಿದಂತೆ ಅನೇಕರು ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ.
ಕೋವಿಡ್-19 ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಬಹುತೇಕ ಜನತೆ ಹಣದ ವ್ಯವಹಾರಗಳನ್ನು ನಡೆಸಲು ಎಟಿಎಂಗಳ ಮೊರೆ ಹೋಗಿದ್ದಾರೆ. ಪಟ್ಟಣದಲ್ಲಿ ಒಟ್ಟು 5 ಎಟಿಎಂಗಳಿವೆ. ಎಸ್ಬಿಐ ಬ್ಯಾಂಕ್‍ನ ಎಟಿಎಂ ಮಾತ್ರ ಮುಚ್ಚಿದ್ದು, ದಿನನಿತ್ಯ ಹಣ ಪಡೆಯಲು ಬಂದು ಬರೀಗೈಯಲ್ಲಿ ವಾಪಸಾಗುತ್ತಿದ್ದಾರೆ. ಮುಖ್ಯವಾಗಿ ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಹೆಚ್ಚು ಖಾತೆಗಳನ್ನು ಈ ಎಸ್ಬಿಐ ಬ್ಯಾಂಕ್‍ನಲ್ಲಿ ಹೊಂದಿರುವುದರಿಂದ ಈ ಎಟಿಎಂನ್ನು ಆಶ್ರಯಿಸಬೇಕಿದೆ.
ಬೇರೆ ಎಟಿಎಂ ಕೇಂದ್ರಗಳು ಕೆಲಸ ಮಾಡುತ್ತಿದ್ದರೂ ಕೂಡ ಎಟಿಎಂ ಬಳಕೆ ಶುಲ್ಕದ ಹೊರೆ ಬೀಳುವುದರಿಂದ ಅಲ್ಲಿ ವ್ಯವಹಾರ ನಡೆಸುವುದು ಅತೀ ವಿರಳವಾಗಿದೆ. ಅಷ್ಟೇ ಅಲ್ಲದೇ ಬೇರೆ ಎಟಿಎಂಗಳಲ್ಲಿ ಒಂದು ಬಾರಿಗೆ 5 ರಿಂದ 10 ಸಾವಿರ ಹಣ ಮಾತ್ರ ತೆಗೆಯಲು ಸಾಧ್ಯವಿದೆ. ಈ ರೀತಿ ಪುನಃ ಪುನಃ ವ್ಯವಹಾರಕ್ಕೆ ಮುಂದಾದಲ್ಲಿ ಪ್ರಕ್ರಿಯೆ ಶುಲ್ಕ ಬೀಳುತ್ತದೆ ಎಂದು ಗ್ರಾಹಕರು ನೋವನ್ನು ತೋಡಿಕೊಂಡಿದ್ದಾರೆ.
ಅಷ್ಟೇ ಅಲ್ಲದೇ ಬ್ಯಾಂಕ್‍ನಲ್ಲಿನ ವ್ಯವಸ್ಥಾಪಕರು ಗ್ರಾಹಕರೊಂದಿಗೆ ಸರಿಯಾಗಿ ವ್ಯವಹರಿಸುತ್ತಿಲ್ಲವೆಂಬ ದೂರು ಸಹ ಸಾರ್ವಜನಿಕರಿಂದ ಬಂದಿದೆ. ಎಟಿಎಂ ಕೇಂದ್ರವನ್ನು ತೆರೆಯುವಂತೆ ಅನೇಕರು ಖುದ್ದು ಮನವಿ ನೀಡಿದರೂ ಕೂಡ ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಗ್ರಾಹಕರು ದೂರಿದ್ದು, ಜೊತೆಗೆ ಬ್ಯಾಂಕ್‍ನ ಹಿರಿಯ ಅಧಿಕಾರಿಗಳು ಹಿಂದುಳಿದ ತಾಲ್ಲೂಕಿನಲ್ಲಿ ಸ್ಥಳೀಯ ಭಾಷೆ ಬರುವಂತಹ ಅಧಿಕಾರಿಗಳನ್ನು ನೇಮಿಸಬೇಕು. ಬ್ಯಾಂಕ್‍ಗಳಿಗೆ ಹೋಗುವಂತಹ ಸಾಮಾನ್ಯ ಜನರೊಂದಿಗೆ ಸಿಬ್ಬಂದಿ ಸೌಜನ್ಯದಿಂದ ವರ್ತಿಸುವಂತೆ ಸೂಚನೆ ನೀಡಬೇಕೆಂದು ಸಾರ್ವಜನಿಕರ ಒತ್ತಾಯವಾಗಿದೆ.