ಚಿಕ್ಕಬಳ್ಳಾಪುರ : ಕೂಲಿ ಹಣದ ವಿಚಾರವಾಗಿ ಇಬ್ಬರು ಸ್ನೇಹಿತರ ನಡುವೆ ಕುಡಿದ ಅಮಲಿನಲ್ಲಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಬೊಮ್ಮೇಪಲ್ಲಿ ಗ್ರಾಮದಲ್ಲಿ ನಡೆದಿದೆ. ಬೊಮ್ಮೇಪಲ್ಲಿ ಗ್ರಾಮದ ರಾಜು ಕೊಲೆಯಾದ ದುರ್ದೈವಿ (30) ಎಂದು ತಿಳಿದು ಬಂದಿದೆ.
ಬೊಮ್ಮೇಪಲ್ಲಿ ಗ್ರಾಮದ ನಾರಾಯಣಸ್ವಾಮಿ ಹಾಗೂ ರಾಜು ಇಲ್ಲಿನ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಕೂಲಿ ಕೆಲಸ ಮಾಡುತಿದ್ದರು. ಈ ನಡುವೆ ಮೂರು ದಿನಗಳ ಹಿಂದೆ ಕೂಲಿ ಹಣದ ವಿಚಾರವಾಗಿ ಕುಡಿದ ಅಮಲಿನಲ್ಲಿ ಗಲಾಟೆ ನಡೆದಿದ್ದು, ನಾರಾಯಣಸ್ವಾಮಿ ರಾಜುವಿಗೆ ಚಾಕುವಿನಿಂದ ಇರಿದು ಇಟ್ಟಿಗೆಯಿಂದ ಹೊಡೆದಿದ್ದಾನೆ. ಕೂಡಲೇ ರಾಜುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಚಿಕ್ಕಬಳ್ಳಾಪುರ ಎಸ್ಪಿ ಡಿ.ಎಲ್ ನಾಗೇಶ್ ಹಾಗೂ ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿ ಆರೋಪಿ ನಾರಾಯಣಸ್ವಾಮಿ ಪತ್ತೆಗೆ ಬಲೆ ಬೀಸಿದ್ದಾರೆ.