ಚಿಕ್ಕಬಳ್ಳಾಪುರ: ಕೊರೊನಾ ನಿಯಂತ್ರಣವೇ ಜಿಲ್ಲಾಡಳಿತಕ್ಕೆ ತಲೆನೋವಾಗಿರುವಾಗ ಬರುತ್ತಿರುವ ಸಾಲು ಸಾಲು ಹಬ್ಬಗಳು ಇನ್ನಷ್ಟು ಸಮಸ್ಯೆ ಸೃಷ್ಟಿಸಬಹುದು ಎಂಬ ಕಾರಣಕ್ಕೆ ಹಬ್ಬಗಳನ್ನು ಸರಳವಾಗಿ ಆಚರಣೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಆರ್.ಲತಾ ಮನವಿ ಮಾಡಿಕೊಂಡಿದ್ದಾರೆ.
ಶ್ರಾವಣ ಮಾಸ ಪ್ರಾರಂಭದಿಂದ ಮಹಾಲಕ್ಷ್ಮಿ, ಗಣೇಶ, ಬಕ್ರೀದ್ ಸೇರಿದಂತೆ ಸಾಲು ಸಾಲು ಹಬ್ಬಗಳು ಬರಲಿದ್ದು, ಜಿಲ್ಲಾಡಳಿಕ್ಕೆ ದೊಡ್ಡ ತಲೆನೋವಾದಂತಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1500ರ ಸಮೀಪದಲ್ಲಿದ್ದು, ಹಬ್ಬಗಳ ಸಂದರ್ಭದಲ್ಲಿ ಕೊರೊನಾ ಹರಡುವಿಕೆ ಹೆಚ್ಚಾಗುವ ಸಾಧ್ಯತೆ ಹಿನ್ನೆಲೆ ಜಿಲ್ಲಾಧಿಕಾರಿ ವಿಡಿಯೋ ಸಂವಾದದ ಮೂಲಕ ಜಿಲ್ಲೆಯ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ಇಂದು ಜಿಲ್ಲಾಧಿಕಾರಿಗಳ ಭವನದಲ್ಲಿ ಜಿಲ್ಲೆಯ ತಾಹಶೀಲ್ದಾರ್, ಇಒ ಸೇರಿದಂತೆ ಮುಸ್ಲಿಂ ಸಮುದಾಯದ ಮುಖಂಡರು, ಜಿಲ್ಲೆಯ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಹಬ್ಬಗಳನ್ನು ಸರಳವಾಗಿ ಆಚರಣೆ ಮಾಡುವಂತೆ ಸೂಚನೆ ನೀಡಿದ್ದಾರೆ.