ಚಿಕ್ಕಬಳ್ಳಾಪುರ: ಸ್ಕೂಟಿಯಲ್ಲಿ ಬಂದ ವ್ಯಕ್ತಿಯೊಬ್ಬ ರಸ್ತೆಯಲ್ಲಿ ಸಿಕ್ಕ ಸಿಕ್ಕವರ ಮೇಲೆ ಚಾಕು ಬೀಸಿ ಹುಚ್ಚಾಟ ನಡೆಸಿರುವ ಘಟನೆ ಚಿಕ್ಕಬಳ್ಳಾಪುರದ ನಗರದ ಬಜಾರ್ ರಸ್ತೆಯ ಬಲಮುರಿ ವೃತ್ತದಲ್ಲಿ ನಡೆದಿತ್ತು. ಘಟನೆ ನಡೆದು ಕೇವಲ 4 ಗಂಟೆಯೊಳಗೆ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.
ರಾತ್ರಿ ಸುಮಾರು 9:30ರ ವೇಳೆಗೆ ಸ್ಕೂಟಿಯಲ್ಲಿ ಜರ್ಸಿ ಧರಿಸಿ, ತಲೆಗೆ ಹೆಲ್ಮೆಟ್ ಹಾಕಿಕೊಂಡು ಬಂದ ಖದೀಮ 8 ಜನರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ಘಟನೆಯಲ್ಲಿ ಓರ್ವ ಮಹಿಳೆ ಸೇರಿದಂತೆ 7 ಜನ ಪುರುಷರು ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.
ಸ್ಥಳಕ್ಕೆ ಎಸ್ಪಿ ನಾಗೇಶ್ ಭೇಟಿ ನೀಡಿ, ಗಾಯಾಳುಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ನಡೆದ 4 ಗಂಟೆ ಅವಧಿಯೊಳಗೆ ಚಿಕ್ಕಬಳ್ಳಾಪುರ ಪೊಲೀಸರು ತಾಲೂಕಿನ ಕಳವಾರ ಬಳಿ ರೌಡಿ ಶೀಟರ್ ಅರ್ಜನ್ನನ್ನು ವಶಕ್ಕೆ ಪಡೆದುಕೊಂಡು, ಆರೋಪಿಯಿಂದ ಚಾಕು ಹಾಗೂ ಕೃತ್ಯಕ್ಕೆ ಬಳಸಿದ ಸ್ಕೂಟಿಯನ್ನ ಜಪ್ತಿ ಮಾಡಿಕೊಂಡಿದ್ದಾರೆ.
ಅರ್ಜುನ್ ಕಂದವಾರದ ದೇವಸ್ಥಾನದ ಬಳಿ ಪ್ರತಿನಿತ್ಯ ಮಲಗುತ್ತಿದ್ದ. ಕಳೆದ 2- 3 ದಿನಗಳ ಹಿಂದೆ ದೇವಸ್ಥಾನ ಪಕ್ಕದಲ್ಲಿ ಮಲಗಿದ್ದ ವ್ಯಕ್ತಿಯೊಬ್ಬನ ಬಳಿ ಈತ ಮೊಬೈಲ್ ಕಳವು ಮಾಡಿದ್ದು, ಇದೇ ವಿಚಾರವಾಗಿ ಮೊಬೈಲ್ ಮಾಲೀಕನಿಗೆ ಹಾಗೂ ಅರ್ಜುನ್‌ಗೆ ಗಲಾಟೆ ನಡೆದಿದೆ.
ಘಟನೆಯ ಬಳಿಕ ಮೊಬೈಲ್ ಮಾಲೀಕ ತನ್ನ ಸ್ನೇಹಿತರ ಜೊತೆ ಹೋಗಿ ಅರ್ಜುನ್ ಮೇಲೆ ಹಲ್ಲೆ ಮಾಡಿ ಮೊಬೈಲ್ ಪಡೆದುಕೊಂಡಿದ್ದಾರೆ. ಇದೇ ವಿಚಾರವಾಗಿ ಮತ್ತೆ ನಗರದ ಜೂನಿಯರ್ ಕಾಲೇಜು ಬಳಿ ಗಲಾಟೆ ನಡೆದಿದ್ದು, ನಂತರ ಅರ್ಜುನ್ ಬಜಾರ್ ರಸ್ತೆಗೆ ಬಂದು ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡಿ ಪರಾರಿಯಾಗಿದ್ದ. ಈ ಕುರಿತು ನಗರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕೊಲೆಯಾಗಿದ್ದ ಮಹಿಳೆ ಜೀವಂತ ಪತ್ತೆ.. 10 ವರ್ಷ ಶಿಕ್ಷೆಗೊಳಗಾಗಿದ್ದ ಪತಿ ಈಗ ನಿಟ್ಟುಸಿರು!