ಚಿಕ್ಕಬಳ್ಳಾಪುರ: ಜಮೀನಲ್ಲಿ 6 ಕೋಟಿ ಮೌಲ್ಯದ ವಜ್ರದ ಕಲ್ಲು ಸಿಕ್ಕಿದೆ ಎಂದು ನಂಬಿಸಿ ಅದನ್ನು ಮಾರಾಟ ಮಾಡಿಸಿಕೊಟ್ಟರೆ 3 ಕೋಟಿ ಕಮೀಷನ್ ಕೊಡುವುದಾಗಿ ಆಮಿಷವೊಡ್ಡಿದ್ದ ಗ್ಯಾಂಗ್‌ವೊಂದನ್ನು ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜಿಲ್ಲೆಯ ಚಿಂತಾಮಣಿ ಮೂಲದ ಮಂಜುನಾಥ್ ಪ್ರಮುಖ ಆರೋಪಿಯಾಗಿದ್ದು, ಈತನಿಗೆ ಸಹಾಯ ಮಾಡಿದ್ದ ಹೊನ್ನಪ್ಪ, ಅರವಿಂದ್, ಚಿನ್ನಪ್ಪರೆಡ್ಡಿ ಹಾಗೂ ಶಿವಣ್ಣ ಎಂಬುವರನ್ನು ಬಂಧಿಸಲಾಗಿದೆ.
ಬಾಗೇಪಲ್ಲಿ ಮೂಲದ ಪ್ರಶಾಂತ್ ಎಂಬುವರು ಪೆಟ್ರೋಲ್ ಬಂಕ್ ನಿರ್ಮಾಣಕ್ಕೆ ಜಮೀನು ಹುಡುಕುತ್ತಿದ್ದರು. ಈ ವೇಳೆ ಪರಿಚಯವಾದ ರಿಯಲ್ ಎಸ್ಟೇಟ್ ಏಜೆಂಟ್ ಹೊನ್ನಪ್ಪ ಜಮೀನು ತೋರಿಸಲು ಬಂದಿದ್ದ. ಈ ವೇಳೆ ಪ್ರಶಾಂತ್ ಜೊತೆ ಮಾತನಾಡಿದ ಹೊನ್ನಪ್ಪ ನಮ್ಮ ಬಳಿ ಜಮೀನಿನಲ್ಲಿ ಸಿಕ್ಕ ವಜ್ರದ ಕಲ್ಲಿದೆ. ಅದು 6 ಕೋಟಿ ರೂಪಾಯಿ ಬೆಲೆ ಬಾಳುತ್ತದೆ ಎಂದು ನಂಬಿಸಿದ್ದ.
ಪ್ರಶಾಂತ್ 6 ಕೋಟಿ ಕೊಟ್ಟು ಖರೀದಿಸಲು ಸಾಧ್ಯವಿಲ್ಲ ಎಂದಾಗ ಬೇರೆಯವರಿಗೆ ಮಾರಾಟ ಮಾಡಿಸಿಕೊಟ್ಟರೆ ನಿಮಗೆ 3 ಕೋಟಿ ಕಮೀಷನ್ ಕೊಡುವುದಾಗಿ ಆಮಿಷವೊಡ್ಡಿದ್ದ. ನಂತರ ಮಾರಾಟ ಮಾಡಿಕೊಡುವುದಾಗಿ ಪ್ರಶಾಂತ್ ಒಪ್ಪಿಕೊಂಡಿದ್ದ. ಆದರೆ ವಜ್ರದ ಕಲ್ಲು ಕಂಡ ಪ್ರಶಾಂತ್ಗೆ ಅದು ನಕಲಿ ಎಂದು ಖಾತ್ರಿಯಾಗಿದ್ದು, ಬಳಿಕ ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದ.
ವಜ್ರ ನೀಡುವ ಭರದಲ್ಲಿ ಪ್ರಶಾಂತ್ ಬಳಿ ಬಂದಿದ್ದ ಗ್ಯಾಂಗ್ ಅನ್ನು ಪೊಲೀಸರು ಅಡ್ಡಗಟ್ಟಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.