ಚಿಕ್ಕಬಳ್ಳಾಪುರ : ಕಳೆದ 20 ವರ್ಷಗಳಿಂದ ಸ್ವಂತ ಮನೆಯಿಲ್ಲದೇ ಬಾಡಿಗೆ ಮನೆಗೆ ಬಾಡಿಗೆ ಕಟ್ಟಲಾರದೆ 20 ಕುಟುಂಬಗಳು ಬೀದಿಗೆ ಬಂದ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಸಿದ್ದೇಪಲ್ಲಿ ಕ್ರಾಸ್ ಬಳಿ ನಡೆದಿದೆ.
ತಾಲೂಕಿನ ಭೂಮಿಶೆಟ್ಟಿಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಿದ್ದೇಪಲ್ಲಿ ಕ್ರಾಸ್ನಲ್ಲಿ ಸರಿ ಸುಮಾರು 20 ವರ್ಷಗಳಿಂದ 20 ಕುಟುಂಬಗಳು ವಾಸವಾಗಿದ್ದು, ಇವರಿಗೆ ಸರ್ಕಾರದಿಂದಾಗಲಿ ಅಥವಾ ಗ್ರಾಮ ಪಂಚಾಯತ್ ಅನುದಾನದ ವಸತಿ ಯೋಜನೆಯಡಿ ಈವರೆಗೂ ವಸತಿ ಸೌಲಭ್ಯ ಕಲ್ಪಿಸಿಲ್ಲ. ನಿತ್ಯ ಕೂಲಿ ಮಾಡಿ ಜೀವನವನ್ನು ನಡೆಸುತ್ತಿದ್ದ ಕುಟುಂಬಗಳು ಸದ್ಯ ದಿಕ್ಕು ತೋಚದಂತಾಗಿ ಬಾಡಿಗೆ ಮನೆ ತೊರೆದು ಬೀದಿಗೆ ಇಳಿದಿದ್ದಾರೆ.
ಸರ್ಕಾರ ಸೂರು ವಂಚಿತರಿಗೆ ವಸತಿ ಸೌಲಭ್ಯ ಒದಗಿಸುವ ಸಲುವಾಗಿ ಹಲವಾರು ಯೋಜನೆಗಳನ್ನು ಜಾರಿ ತಂದಿದೆ. ಆದರೆ, ಪಂಚಾಯತ್ ಅಧಿಕಾರಿಗಳು ಹಾಗೂ ತಾಲೂಕು ಅಧಿಕಾರಿಗಳ ಬೇಜಬ್ದಾರಿತನದಿಂದ 20 ವರ್ಷಗಳಾದ್ರೂ ಸ್ವಂತ ಸೂರು ಇಲ್ಲದೇ ಬೀದಿಯಲ್ಲಿ ವಾಸಿಸುವಂತಾಗಿದೆ.
ಸೌಲಭ್ಯ ವಂಚಿತ ಕುಟುಂಬಗಳು ಪುಟ್ಟ ಮಕ್ಕಳೊಂದಿಗೆ ಬೀದಿಗೆ ಬಂದು ಸರ್ಕಾರಿ ಜಮೀನಿನಲ್ಲಿ ಶೆಡ್ ನಿರ್ಮಾಣ ಮಾಡಿಕೊಂಡು ವಾಸಿಸುತ್ತಿದ್ದಾರೆ. ಆದರೆ, ಗ್ರಾಮದ ಖರಾಬು ಜಮೀನಿನ ಪಕ್ಕದಲ್ಲಿರುವವರು ಇದು ನಮ್ಮ ಜಮೀನು, ಇಲ್ಲಿ ನೀವು ಬರಬಾದರು ಎಂದು ಗುಡಿಸಲು ತೆರವುಗೊಳಿಸಲು ಮುಂದಾಗುತ್ತಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನಮಗೆ ಮನೆಗಳನ್ನು ಮಾಡಿಕೊಳ್ಳಲು ಗುರುತಿಸಿ ಕೊಡಬೇಕೆಂದು ತಾಲೂಕಾಡಳಿತಕ್ಕೆ ಮನವಿ ಮಾಡಿದ್ದಾರೆ.
ಕೊರೊನಾದಿಂದ ಇಡೀ ದೇಶವೇ ತತ್ತರಿಸಿದೆ. ನಾವು ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದೆವು. ಆದರೆ, ದಿನನಿತ್ಯ ಕೂಲಿ ಮಾಡಿ ಜೀವನ ಸಾಗಿಸುತ್ತಿರುವ ನಮ್ಮ ಕೈಯಲ್ಲಿ ಬಾಡಿಗೆ ಕಟ್ಟಲು ಸಾಧ್ಯವಾಗುತ್ತಿಲ್ಲ. ಹಾಗಾಗಿ, ನಾವು ಗುಡಿಸಲಿನಲ್ಲಿ ಜೀವನ ಸಾಗಿಸಲು ಮುಂದಾಗಿದ್ದೇವೆ ಅಂತಿದಾರೆ ಸೂರಿಲ್ಲದ ಸಂತ್ರಸ್ತೆ ಲಕ್ಷ್ಮಿ.