ಚಿಕ್ಕಬಳ್ಳಾಪುರ: ಜಿಲ್ಲೆಯಾದ್ಯಂತ ತುರ್ತು ಪರಿಸ್ಥಿತಿಯಲ್ಲಿ ಸಾರ್ವಜನಿಕರಿಗೆ ಪೊಲೀಸ್ ಇಲಾಖೆ ನೆರವಾಗಲು 112 ತುರ್ತು ದೂರವಾಣಿಗೆ ಜಿಲ್ಲಾವರಿಷ್ಠಾಧಿಕಾರಿ ಚಾಲನೆ ನೀಡಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವತಿಯಿಂದ 112 ತುರ್ತು ಕರೆ ಬಗ್ಗೆ ಜನಜಾಗೃತಿ ಮೂಡಿಸುತ್ತಿದ್ದು ಸಾರ್ವಜನಿಕರು ಇದರ ಉಪಯೋಗವನ್ನು ಪಡೆದುಕೊಳ್ಳುವಂತೆ ಎಎಸ್ಪಿ ಮನವಿ ಮಾಡಿದ್ದಾರೆ. ದೇಶಾದ್ಯಂತ ಒಂದೇ ತುರ್ತು ಕರೆ ಘೋಷಣೆ ಮಾಡಿರುವ ಕಾರಣ ಇದರಡಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸರು 112 ದೂರವಾಣಿ ಬಗ್ಗೆ ಜಿಲ್ಲೆಯಾದ್ಯಂತ ಜನ ಜಾಗೃತಿ ಅಭಿಯಾನ ಹಮ್ಮಿಕೊಂಡಿದ್ದಾರೆ.
ಜನನಿಬಿಡ ಪ್ರದೇಶಗಳಲ್ಲಿ ತುರ್ತು ಕರೆ ವಾಹನಗಳನ್ನು ನಿಲ್ಲಿಸಿ ಜನ ಜಾಗೃತಿ ಹಮ್ಮಿಕೊಳ್ಳುವ ಮೂಲಕ ತುರ್ತು ಪರಿಸ್ಥಿತಿಯಲ್ಲಿ ನೆರವಾಗುವ ಭರವಸೆ ಕೊಡಲಾಗುತ್ತಿದೆ. ಈಗಾಗಲೇ ಜಿಲ್ಲೆಯಾದ್ಯಂತ 7 ವಾಹನಗಳು ಬಳಕೆಯಲ್ಲಿದ್ದು ದಿನದ 24 ಗಂಟೆಯೂ ಸೌಲಭ್ಯ ಒದಗಿಸಲಿವೆ. ಚಾಲನೆ ನೀಡಿದ ನಾಲ್ಕು ದಿನಗಳಲ್ಲಿ 73 ಕರೆಗಳನ್ನು ಸ್ವೀಕರಿಸಿದ್ದು ತುರ್ತಾಗಿ ಸ್ಪಂದಿಸಿದ್ದೇವೆ. ಕರೆ ಮಾಡಿದ ಹತ್ತರಿಂದ ಹದಿನೈದು ನಿಮಿಷಗಳಲ್ಲಿ ಸ್ಥಳದಲ್ಲಿ ನಮ್ಮ ಸಿಬ್ಬಂದಿ ಸಮೇತ ಹಾಜರಿರಲಿದೆ. ಈಗಾಗಲೇ ಪ್ರತಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿದ್ದು ಆ ಸ್ಥಳಗಳಲ್ಲಿ ವಾಹನಗಳು ಸದಾ ಸಿದ್ಧವಾಗಿರಲಿವೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.