ಚಾಮರಾಜನಗರ: ಎಷ್ಟೇ ಮನವಿ ಮಾಡಿದರೂ, ದೂರು ನೀಡಿದ್ರೂ, ಗ್ರಾಮ ಪಂಚಾಯಿತಿಯಾಗಲಿ, ಆರೋಗ್ಯ ಇಲಾಖೆ ಸಿಬ್ಬಂದಿ ಆಗಲಿ ತಲೆ ಕೆಡಿಸಿಕೊಂಡಿರಲಿಲ್ಲ. ಇದರಿಂದ ಬೇಸತ್ತು, ಕೊನೆಗೆ ಆ ಗ್ರಾಮದ ಯುವಕರೇ ತಮ್ಮೂರಿನ ಬಸ್ ನಿಲ್ದಾಣ ಸ್ವಚ್ಛಗೊಳಿಸಿದ್ದಾರೆ.
ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟ ಗ್ರಾ.ಪಂ ವ್ಯಾಪ್ತಿಗೆ ಒಳಪಡುವ ವಡಕೆಹಳ್ಳ ಗ್ರಾಮದಲ್ಲಿನ ಬಸ್ ನಿಲ್ದಾಣ ಕುಡುಕರ ತಾಣವಾಗಿ ಮಾರ್ಪಟ್ಟಿತ್ತು. ಸಂಬಂಧಪಟ್ಟವರ ಗಮನಕ್ಕೆ ತಂದರೂ ಯಾವುದೇ ಉಪಯೋಗವಾಗದಿದ್ದರಿಂದ, ಗ್ರಾಮದ ಜೈ ಭೀಮ್ ಯುವಕರ ಸಂಘವು ಬಸ್ ನಿಲ್ದಾಣ ಸ್ವಚ್ಛಗೊಳಿಸಿ, ಅಂಟಿಸಿದ್ದ ಸಿನಿಮಾ ಪೋಸ್ಟರ್ಗಳನ್ನು ತೆಗೆದು ಸುಣ್ಣ-ಬಣ್ಣ ಹಚ್ಚಿದ್ದಾರೆ.
ಯಾರೂ ಮದ್ಯಪಾನ ಮಾಡುವುದಾಗಲಿ, ಧೂಮಪಾನ ಮಾಡಿ ನಿಲ್ದಾಣ ಗಲೀಜು ಮಾಡಬೇಡಿ, ವಾಹನಗಳನ್ನು ಪಾರ್ಕಿಂಗ್ ಮಾಡಬೇಡಿ ಎಂದು ಸಂಘದ ಯುವಕರು ಭಿತ್ತಿಪತ್ರ ಅಂಟಿಸಿ ಜಾಗೃತಿ ಮೂಡಿಸುವ ಜೊತೆಗೆ ಗಿಡವೊಂದನ್ನು ನೆಟ್ಟು ನೀರೆರೆದಿದ್ದಾರೆ.