ಚಾಮರಾಜನಗರ: ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕೊಳ್ಳೇಗಾಲ ವಾಸವಿ ವಿದ್ಯಾಕೇಂದ್ರದ ನೂತನ ಸಿಬಿಎಸ್ಇ ವಿಭಾಗ ಉದ್ಘಾಟಿಸಿ ಮಕ್ಕಳಿಗೆ ಪರಿಸರ ಪಾಠ ಮಾಡಿದರು.
ವಿದ್ಯಾರ್ಥಿಗಳು ಓದಿನ ಕಡೆಗೆ ಹೆಚ್ಚು ಒತ್ತು ನೀಡಬೇಕು ಹಾಗೆಯೇ ಕ್ರೀಡೆಯಲ್ಲೂ ಸಹ ಭಾಗವಹಿಸಬೇಕು. ಇಂದಿನ ಮಕ್ಕಳು ಕಂಪ್ಯೂಟರ್ಗಿಂತ ಹೆಚ್ಚಿನ ಜ್ಞಾನವನ್ನು ತಿಳಿಯಬೇಕು. ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಮಯ ವ್ಯರ್ಥ ಮಾಡಬೇಡಿ ಎಂದು ಕಿವಿಮಾತು ಹೇಳಿದರು.
ಸಾಂಸ್ಕೖತಿಕ ನಗರಿ ಎಂದು ಹೆಸರಾಗಿರುವ ಮೈಸೂರು ಮಾತ್ರ ಸ್ವಚ್ಚ ಇದ್ದರೆ ಸಾಲದು ಇಡೀ ಕರ್ನಾಟಕ ಸ್ವಚ್ಚವಾಗಿರಬೇಕು ರಾಜ್ಯವನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ಮೈಸೂರು ರಾಜಮನೆತನಕ್ಕೂ ಚಾಮರಾಜನಗರಕ್ಕೂ ನಿಕಟ ಸಂಬಂಧ ಇತ್ತು ಅದು ಈಗಲು ಮುಂದುವರಿಯಬೇಕು ಎಂಬುದು ನಮ್ಮ ಅಭಿಲಾಷೆ. ಚಾಮರಾಜ ಒಡೆಯರ್ ಅವರು ಚಾಮರಾಜನಗರದಲ್ಲಿ ಜನಿಸಿದವರು. ಅಂದಿನ ರಾಜಾಡಳಿತವನ್ನು ಸುವರ್ಣಯುಗ ಎಂದು ಸ್ಮರಿಸಿಕೊಳ್ಳಲಾಗುತ್ತಿದೆ. ಅಂದಿನ ಆಡಳಿತ ಮತ್ತು ಜನರು ಹೇಗಿದ್ದರು ಎಂಬುದು ಇದರಿಂದ ತಿಳಿಯುತ್ತದೆ. ಅರಮನೆಯಿಂದ ಆಗಬಹುದಾದ ಕೆಲಸ ಕಾರ್ಯಗಳನ್ನು ಮಾಡಲು ನಾವು ಸದಾ ಸಿದ್ದರಿದ್ದೇವೆ ಎಂದು ಹೇಳಿದರು.