ಚಾಮರಾಜನಗರ: ಕೊಳ್ಳೇಗಾಲದ ಆಂಜನೇಯ ಸ್ವಾಮಿಯೊಂದಿಗೆ ಏಸುವಿನ ಫೋಟೋವನ್ನಿಟ್ಟು ಪೂಜೆ ಮಾಡಿದ್ದ ಪ್ರಕರಣ ಸಂಬಂಧ ಎಲ್ಲರ ಮುಂದೆ ಕ್ಷಮೆ ಕೇಳಿದ ಅರ್ಚಕರು ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.
ಕಳೆದ ದಿ.5 ರಂದು ಕೊಳ್ಳೇಗಾಲದ ವೀರಾಂಜನೇಯಸ್ವಾಮಿ ದೇಗುಲಕ್ಕೆ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್ ಭೇಟಿ ನೀಡಿದ್ದ ವೇಳೆ, ಆಂಜನೇಯ ಸ್ವಾಮಿ ಒಟ್ಟಿಗೆ ಏಸುವಿನ ಪೋಟೋವೊಂದಕ್ಕೆ ಅರ್ಚಕ ಟಿ.ವಿ.ಎಸ್. ರಾಘವನ್ ಪೂಜೆ ಸಲ್ಲಿಸಿದ್ದರು. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿ ತೀವ್ರ ಆಕ್ಷೇಪ ಮತ್ತು ಟೀಕೆಗೆ ಗುರಿಯಾಗಿದ್ದವು.
ಫೇಸ್ಬುಕ್ ಹಾಗೂ ವಾಟ್ಸಾಪ್ನಲ್ಲಿ ಇವರ ಚಿತ್ರಗಳು ಹರಿದಾಡಿ ಟೀಕೆಗೆ ಗುರಿಯಾಗುತ್ತಿದ್ದಂತೆಯೇ ಎಚ್ಚೆತ್ತ ಅರ್ಚಕರು ಕ್ಷಮೆಯಾಚನೆ ಮಾಡುವ ಮೂಲಕ ಪ್ರಕರಣಕ್ಕೆ ಇತಿಶ್ರೀ ಹಾಡಿದ್ದಾರೆ. ಕೆಲ ವಾಟ್ಸಾಪ್ ಗುಂಪುಗಳಲ್ಲಿ ಮತಾಂತರದ ಚಿತ್ರಗಳೆಂದು ಬಿಂಬಿಸಿ ಸುಳ್ಳು ಮಾಹಿತಿ ಹರಿದಾಡಿತ್ತು. ಘಟನೆ ಸಂಬಂಧ ಕೊಳ್ಳೇಗಾಲ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ.