ಚಾಮರಾಜನಗರ: ಜಿಲ್ಲೆಯ ಗಂಗಾಮತಸ್ಥರ ಬೀದಿಯಲ್ಲಿ ವಾಸಿಸುತ್ತಿರುವ ಲಲಿತಾ ಟಾಗೆಟ್ ಎಂಬ ಹಿರಿಯ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ಈಗಲೂ ಯುವಜನತೆಗೆ ಸ್ಪೂರ್ತಿಯ ಚಿಲುಮೆ. ಅಂದು ತಾವು ಮಾಡಿದ ಹೋರಾಟ, ತೋರಿದ್ದ ಧೈರ್ಯವನ್ನು ಈಗಲೂ ನೆನಪಿಸಿಕೊಂಡು ಅವರು ನಸುನಗುತ್ತಾರೆ.
ಲಲಿತಾ ಟಾಗೆಟ್ (91) ಅವರು ತಮ್ಮ 14 ನೇ ವಯಸ್ಸಿನಲ್ಲಿ ಸ್ವಾತಂತ್ರ್ಯದ ಘೋಷಣೆಗಳಿಂದ ಸ್ಪೂರ್ತಿಗೊಂಡು ಚಳವಳಿಗೆ ಧುಮುಕಿದ್ದರು. ಕುಟುಂಬಸ್ಥರ ಮಾತು ಕೇಳದೆ ಬ್ರಿಟಿಷರ ವಿರುದ್ಧದ ಚಳುವಳಿಯಲ್ಲಿ ಭಾಗವಹಿಸಿದ್ದರು. 1947ರ ಆಗಸ್ಟ್ ತಿಂಗಳಿನಲ್ಲಿ ಪ್ರತಿಭಟನಾ ಮೆರವಣಿಗೆಯಲ್ಲಿ ಟಾಗೆಟ್ ಭಾಗಿಯಾಗಿದ್ದರು. ಬಳಿಕ ಇವರನ್ನು ಬಂಧಿಸಿದ ಪೊಲೀಸರು ಮೈಸೂರಿನ ಜೈಲಿನಲ್ಲಿ ಸುಮಾರು ಒಂದು ತಿಂಗಳು ಇರಿಸಿದ್ದರು.
ಈ ವೇಳೆ ಸ್ವಾತಂತ್ರ್ಯ ಚಳವಳಿಯ ನೇತೃತ್ವ ವಹಿಸಿದ್ದ ಮುಖಂಡರು ಹೇಳಿಕೊಟ್ಟಂತೆ ಸೆರೆಮನೆಯಲ್ಲಿ "ತನಗೆ ತುಪ್ಪ ಬೇಕು, ಮೊಸರು ಬೇಕು, ಚಟ್ನಿಪುಡಿ ಇಲ್ಲದೆ ಊಟ ಮಾಡುವುದಿಲ್ಲ" ಎಂದು ರಂಪಾಟ ಮಾಡಿ ಊಟ ಬಿಟ್ಟು ಜೈಲು ಸಿಬ್ಬಂದಿಯ ನಿದ್ದೆಗೆಡಿಸಿದ್ದರಂತೆ. ನಂತರ ಸೆರೆಮನೆಯಿಂದ ವಾಪಸ್ ಆದ ಬಳಿಕ "ಮೈಸೂರು ಚಲೋ" ಹೋರಾಟದಲ್ಲೂ ಇವರು ಭಾಗವಹಿಸಿದ್ದರು.
ಪೊಲೀಸರಿಂದ ಲಾಠಿ ಕಿತ್ತೆಸೆದ ದಿಟ್ಟೆ: ಪ್ರತಿಭಟನೆ, ಮೆರವಣಿಗೆಗಳಲ್ಲಿ ಮುಂದಿರುತ್ತಿದ್ದ ಟಾಗೆಟ್ ಅವರು ಕೆಲವೊಮ್ಮೆ ಪೊಲೀಸರ ಲಾಠಿಗಳನ್ನು ಕಿತ್ತುಕೊಂಡು ಬಿಸಾಡುತ್ತಿದ್ದರಂತೆ. ಪೊಲೀಸ್ ಠಾಣೆಗಳ ಬಳಿ ತೆರಳಿ ಅಲ್ಲಿನ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಪರಾರಿಯಾಗುತ್ತಿದ್ದರಂತೆ. ತನ್ನ ತಾಯಿ ಮನೆಯಲ್ಲಿ ಕೂಡಿ ಹಾಕಿದ್ರು ಕೂಡ ಛಾವಣಿ ಹೆಂಚು ಇಳಿಸಿ ಹೊರಹೋಗಿ ಪ್ರತಿಭಟನೆಯಲ್ಲಿ ಭಾಗಿಯಾಗುವುದು ಸಾಮಾನ್ಯವಾಗಿತ್ತು ಎಂದು ಲಲಿತಾ ಟಾಗೆಟ್ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
"ಆಗ ನನಗೆ ಬಹಳ ಧೈರ್ಯ, ಈ ದೇಶ ನನ್ನದು, ಈ ಊರು ನಮ್ಮದು, ಆಕಾಶವೂ ನಮ್ಮದು, ಭೂಮಿ ನಮ್ಮದೇ ಎಂದು ಘೋಷಣೆ ಕೂಗುತ್ತಿದ್ದೆ. ಚಿಕ್ಕ ವಯಸ್ಸಾಗಿದ್ದರಿಂದ ಪೊಲೀಸರು ಹೊಡೆಯುತ್ತಿರಲಿಲ್ಲ. ಆದ್ದರಿಂದ ನಾನು ರಂಪಾಟ ಮಾಡುತ್ತಿದ್ದೆ. ಈಗ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದು ಮನಸ್ಸಿಗೆ ಖುಷಿ ಕೊಡುತ್ತದೆ. ಈ ದೇಶ ನಮ್ಮದು, ಇಲ್ಲಿನ ಜನರು ನಮ್ಮವರೇ, ವೈರತ್ವ ಶತೃತ್ವ ಮರೆತು ಒಂದಾಗಿ ಬಾಳೋಣ. ಆ ಕಾಲಕ್ಕಿಂತ ಈಗ ಎಲ್ಲರೂ ಜಾಗೃತರಾಗಿದ್ದಾರೆ. ದೇಶಾಭಿಮಾನ ಎಲ್ಲರಲ್ಲೂ ಇದೆ" ಎಂದು ಅವರು ಹೇಳಿದರು.
ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಜಿಲ್ಲಾಡಳಿತ ಸೇರಿದಂತೆ ಜನಾರ್ದನ ಪ್ರತಿಷ್ಠಾನ ಮುಂತಾದ ಸಂಘ-ಸಂಸ್ಥೆಗಳು ಲಲಿತಾ ಟಾಗೆಟ್ ಅವರಿಗೆ ಸನ್ಮಾನಿಸಿ, ತಿರಂಗ ಕೊಟ್ಟು ಗೌರವಿಸಿದರು.