ಚಾಮರಾಜನಗರ: ಇಲ್ಲೊಬ್ಬ ಧೈರ್ಯಶಾಲಿ ಮಹಿಳೆ ಕಳೆದ 10 ವರ್ಷಗಳಿಂದ ದಟ್ಟ ಅರಣ್ಯವನ್ನು ಕಾಯುತ್ತಿದ್ದಾರೆ.
ಮಲೆಮಹದೇಶ್ವರ ವನ್ಯಜೀವಿಧಾಮ ಪಿ.ಜಿ.ಪಾಲ್ಯ ವಲಯದಲ್ಲಿ ನಾಗಮ್ಮ ಎಂಬವರು ಕಳೆದೊಂದು ದಶಕದಿಂದ ಅರಣ್ಯ ಇಲಾಖೆಯಲ್ಲಿ ದುಡಿಯುತ್ತಿರುವ ಏಕೈಕ ಮಹಿಳಾ ಫಾರೆಸ್ಟ್ ವಾಚರ್. ಇವರು 25 ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ಫಾರೆಸ್ಟ್ ವಾಚರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಡಿಎಫ್ಒ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಇವರು, ಆ ವೇಳೆ ಬೇಟೆಗಾರರ ಮನೆ ಮೇಲೆ ದಾಳಿ, ಗಸ್ತು ತಿರುಗುವ ಕೆಲಸವಷ್ಟೇ ಅಲ್ಲದೇ ಬೆಂಕಿ ಬಿದ್ದಾಗ ನಂದಿಸುವ ಕಾರ್ಯಾಚರಣೆಯಲ್ಲೂ ಸಕ್ರಿಯವಾಗಿ ಪಾಲ್ಗೊಂಡು ಪುರುಷ ವಾಚರ್ಗಳನ್ನು ನಾಚಿಸಿದ್ದಾರೆ.
ಈ ಬಗ್ಗೆ ಮಲೆಮಹದೇಶ್ವರ ವನ್ಯಜೀವಿಧಾಮದ ಡಿಎಫ್ಒ ಏಡುಕುಂಡಲು ಮಾತನಾಡಿ, ನಾಗಮ್ಮ ನಮ್ಮ ವನ್ಯಜೀವಿಧಾಮದಲ್ಲಿರುವ ಏಕೈಕ ಮಹಿಳಾ ವಾಚರ್ ಆಗಿ ಬೇರೆಯವರಿಗೆ ಸ್ಫೂರ್ತಿಯಾಗುವಂತೆ ಕಾರ್ಯ ನಿರ್ವಹಿಸುತ್ತಾರೆ. ಸಾಕಷ್ಟು ಬೆಂಕಿ ಅನಾಹುತಗಳನ್ನು ತಡೆದಿದ್ದು ಮಹಿಳೆ ಅಬಲೆಯಲ್ಲ ಸಬಲೆ ಎಂಬುದಕ್ಕೆ ನಿದರ್ಶನವಾಗಿದ್ದಾರೆ. ಸದ್ಯ ಪಿ.ಜಿ.ಪಾಲ್ಯದ ಅರಣ್ಯ ನರ್ಸರಿಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಅಭಿನಂದಿಸಿದ್ದಾರೆ.
ಪಂಚನಾರಿಯರ ಪವರ್: ಮಲೆಮಹದೇಶ್ವರ ವನ್ಯಜೀವಿಧಾಮದಲ್ಲಿ ನಾಗಮ್ಮ ಎಂಬ ಫಾರೆಸ್ಟ್ ವಾಚರ್, ಬಿಆರ್ ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಆದಿವಾಸಿ ಮಹಿಳೆ ಸೇರಿದಂತೆ ಮೂವರು ವಾಚರ್, ಎಸ್ಟಿಪಿಎಫ್ ಬಂಡೀಪುರ ವಿಭಾಗದಲ್ಲಿ ಓರ್ವ ಮಹಿಳೆ ಫಾರೆಸ್ಟ್ ವಾಚರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು ಅರಣ್ಯ ರಕ್ಷಣೆಯಲ್ಲಿ ಈ ಪಂಚನಾರಿಯರು ತಮ್ಮ ಪವರ್ ಪ್ರದರ್ಶಿಸಿದ್ದಾರೆ.
ಮಹಿಳೆಯರು ಕಾಡು ಕಾಯುತ್ತಿರುವ ಬಗ್ಗೆ ಚಾಮರಾಜನಗರ ಸಿಸಿಎಫ್ ಮನೋಜ್ ಮಾತನಾಡಿ, ಅರಣ್ಯ ಇಲಾಖೆಯ ಎಲ್ಲಾ ಹಂತದಲ್ಲೂ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಮುಂಚೂಣಿ ಸಿಬ್ಬಂದಿ ಎಂದು ಕರೆಯುವ ಫಾರೆಸ್ಟ್ ವಾಚರ್ಗಳಲ್ಲಿ ಇರುವ ಬೆರಳೆಣಿಕೆಯ ಮಹಿಳೆಯರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಕೆ.ಗುಡಿಯಲ್ಲಿ ರಂಗಮ್ಮ ಎಂಬ ಆದಿವಾಸಿ ಮಹಿಳೆ ಗಸ್ತು ತಿರುಗುತ್ತಾರೆ. ಕೌಟುಂಬಿಕ ಸಮಸ್ಯೆಯಿಂದ ಕೆಲ ತಿಂಗಳುಗಳ ಮಟ್ಟಿಗಷ್ಟೇ ಕಚೇರಿ ಕೆಲಸಕ್ಕೆ ಮನವಿ ಮಾಡುತ್ತಾರೆಯೇ ಹೊರತು ಉಳಿದಂತೆ ಫೀಲ್ಡಿಗೆ ಹೋಗಲೇ ಬೇಕಾಗುತ್ತದೆ, ಯಾವುದೇ ಸಮಸ್ಯೆ, ಅಂಜಿಕೆ ಇಲ್ಲದೇ ಮಹಿಳೆಯರು ಅರಣ್ಯ ರಕ್ಷಣೆಯಲ್ಲಿ ತೊಡಗಿರುವುದು ಬೇರೆಯವರಿಗೆ ಉತ್ತೇಜನಕಾರಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.