ಚಾಮರಾಜನಗರ: ತಮಿಳುನಾಡಿನ ಸತ್ಯಮಂಗಲಂ ಹುಲಿ ಸಂರಕ್ಷಿತ ಪ್ರದೇಶದಲ್ಲಿರುವ ಕೊಂಗಳ್ಳಿ ಬೆಟ್ಟದಲ್ಲಿ ಕುಡಿಯುವ ನೀರು, ಶೌಚಾಲಯಕ್ಕೆ ಭಕ್ತಾದಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಚಾಮರಾಜನಗರ ಜಿಲ್ಲಾ ಕೇಂದ್ರದಿಂದ 30 ಕಿ.ಮೀ ದೂರದಲ್ಲಿರುವ ಕೊಂಗಳ್ಳಿ ಮಲ್ಲಿಕಾರ್ಜುನ ದೇಗುಲಕ್ಕೆ ಬೆಂಗಳೂರು, ಮೈಸೂರಿನಿಂದ ನಿತ್ಯ ನೂರಾರು ಮಂದಿ ಭಕ್ತರು ಭೇಟಿ ಕೊಡುತ್ತಾರೆ. ಆದರೆ, ಇಲ್ಲಿ ಕುಡಿಯಲು ಹಾಗೂ ಸ್ನಾನಕ್ಕೆ ಒಂದೇ ನೀರು ಬಳಸಲಾಗುತ್ತಿದ್ದು, ಶೌಚಾಲಯದ ಸಮಸ್ಯೆಯಂತೂ ಹೇಳತೀರದಾಗಿದೆ.
ವಾರ್ಷಿಕವಾಗಿ ಅಂದಾಜು 80 ಲಕ್ಷ ರೂ.ಯಷ್ಟು ಆದಾಯ ಬರುವ ದೇವಾಲಯಕ್ಕೆ ಕನಿಷ್ಠ ಮೂಲಸೌಕರ್ಯವನ್ನು ಕಲ್ಪಿಸಲು ತಮಿಳುನಾಡು ಮುಜರಾಯಿ ಇಲಾಖೆ ಮನಸ್ಸು ಮಾಡುತ್ತಿಲ್ಲ. ವಾಸ್ತವ್ಯಕ್ಕೆ ಅವಕಾಶವಂತೂ ಕೊಡುತ್ತಿಲ್ಲ, ಕುಡಿಯಲು ನೀರು ಕೊಡದಿದ್ದರೆ ಹೇಗೆ?. ಶೌಚಾಲಯ ಸಮಸ್ಯೆ ಇತ್ತೀಚೆಗೆ ಹೆಚ್ಚು ತಲೆದೂರಿದೆ ಎಂದು ದೇಗುಲದ ಅರ್ಚಕ ಮಲ್ಲಿಕಾರ್ಜುನ ಅಳಲು ತೋಡಿಕೊಂಡಿದ್ದಾರೆ.
ದೇವಸ್ಥಾನ ತಮಿಳುನಾಡಿಗೆ ಸೇರಿದ್ದರೂ, ಕನ್ನಡಿಗರೇ ಹೆಚ್ಚಾಗಿ ಬರುವುದರಿಂದ ಕರ್ನಾಟಕ ಸರ್ಕಾರವಾದರೂ ದೇವಾಲಯ ಅಭಿವೃದ್ಧಿಗೆ ಮುಂದಾಗಬೇಕು. ಬೇಸಿಗೆ ವೇಳೆ ಕಲುಷಿತ ನೀರು ಸೇವಿಸಿ, ಅಹಿತಕರ ಘಟನೆ ನಡೆಯುವ ಮುನ್ನ ಆಡಳಿತ ಮಂಡಳಿ ಎಚ್ಚೆತ್ತು ಮೂಲಸೌಕರ್ಯ ಕಲ್ಪಿಸಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ರಾಜ್ಯದ ಎಲ್ಲಾ ಜನರಿಗೂ ಮನೆ ಕಟ್ಟಿಸಿಕೊಡುತ್ತೇನೆ : ಸಿಎಂ ಬಿಎಸ್ವೈ