ಚಾಮರಾಜನಗರ : ದಕ್ಷಿಣ ವಲಯ ಐಜಿಪಿ ಟಿ. ಬೋರಲಿಂಗಯ್ಯ ಅವರು ಚಾಮರಾಜನಗರ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಇಂದು ಭೇಟಿ ಕೊಟ್ಟು ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದರು. ಬಳಿಕ ಮಾಧ್ಯಮದವರೊಂದಿಗೆ ಮೈಸೂರು ಜಿಲ್ಲೆಯ ಟಿ. ನರಸೀಪುರದ ಯುವ ಬ್ರಿಗೇಡ್ ಸಂಚಾಲಕ ವೇಣುಗೋಪಾಲ್ ನಾಯಕ್ ಹತ್ಯೆ ಪ್ರಕರಣದ ಸಂಬಂಧ ಮಾತನಾಡಿದರು.
ಈ ಬಗ್ಗೆ ನಮ್ಮ ಹಿರಿಯ ಅಧಿಕಾರಿಗಳು ಈಗಾಗಲೇ ಮಾತನಾಡಿದ್ದಾರೆ. ಘಟನೆ ತಡೆಯೋ ವಿಚಾರವಾಗಿ ಪೊಲೀಸರಿಂದ ಸಣ್ಣಪುಟ್ಟ ತಪ್ಪಾಗಿದ್ದು, ಅವಘಡ ತಡೆಯುವಲ್ಲಿ ವಿಫಲರಾಗಿದ್ದೇವೆ. ಘಟನೆ ಬಳಿಕ ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣವನ್ನು ಲಾಜಿಕಲ್ ಎಂಡ್ಗೆ ತೆಗೆದುಕೊಂಡು ಹೋಗಲಾಗುವುದು. ಈ ನಿಟ್ಟಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಏನು ಮಾಡಬೇಕೋ ಅದನ್ನು ಮಾಡಿದ್ದೇವೆ. ಈಗಾಗಲೇ ತನಿಖೆ ನಡೆಸುತ್ತಿದ್ದು, ದಿವಂಗತ ನಟ ಪುನೀತ್ ರಾಜ್ಕುಮಾರ್ ಫೋಟೋ ವಿಚಾರ ಹಾಗು ಬೈಕ್ ಬಿಡಲಿಲ್ಲ ಎಂಬ ವಿಚಾರಗಳ ಬಗ್ಗೆ ಮಾಹಿತಿ ಬರುತ್ತಿದೆ. ಹಳೆ ವೈಷಮ್ಯವೂ ಇರಬಹುದು. ಸಂಪೂರ್ಣ ತನಿಖೆ ಮುಗಿದ ಬಳಿಕ ಎಲ್ಲ ವಿವರ ತಿಳಿಯಲಿದೆ ಎಂದು ಹೇಳಿದರು.
ನಂತರ ಚಾಮರಾಜನಗರ ಜಿಲ್ಲೆಯಲ್ಲಿ ಗಾಂಜಾ ಸೇರಿದಂತೆ ಇನ್ನಿತರೆ ಮಾದಕ ವಸ್ತುಗಳ ಸೇವನೆಗಿಂತ ಮಾರಾಟ ಹಾಗೂ ಸಾಗಣೆ ಹೆಚ್ಚಿರುವ ಮಾಹಿತಿ ಇದ್ದು, ಇದರ ಬಗ್ಗೆ ಅಧಿಕಾರಿಗಳಿಗೆ ಕೆಲವು ಸೂಚನೆ ಕೊಡಲಾಗಿದೆ. ಇನ್ನು ನಗರದಲ್ಲಿ ನೂತನ ಪೊಲೀಸ್ ಠಾಣೆ ಕಟ್ಟಡಗಳನ್ನು ಶೀಘ್ರವೇ ಉದ್ಘಾಟನೆ ಮಾಡಲಾಗುವುದು. ಜೊತೆಗೆ, ಡಿಆರ್ ಸಿಬ್ಬಂದಿಗೆ ಬಡ್ತಿ ನೀಡುವ ಬಗ್ಗೆ ಸರ್ಕಾರದ ಜೊತೆ ಚರ್ಚೆ ನಡೆಸುತ್ತೇನೆ. ಅಪಘಾತ ತಡೆಯುವಲ್ಲಿ ಕ್ರಮ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಬೀಟಿಂಗ್ ವ್ಯವಸ್ಥೆಗಳ ಬಗ್ಗೆ ಸೂಚನೆ ಕೊಟ್ಟಿರುವುದಾಗಿ ಐಜಿಪಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದರು.
ವೇಣುಗೋಪಾಲ್ ನಿವಾಸಕ್ಕೆ ಎಚ್.ಸಿ ಮಹದೇವಪ್ಪ ಭೇಟಿ : ಟಿ. ನರಸೀಪುರದಲ್ಲಿರುವ ಮೃತ ವೇಣುಗೋಪಾಲ್ ನಿವಾಸಕ್ಕೆ ಇಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಎಚ್ ಸಿ ಮಹದೇವಪ್ಪ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಜೊತೆಗೆ ಸಮಾಜ ಕಲ್ಯಾಣ ಇಲಾಖೆಯಿಂದ 4.12 ಲಕ್ಷ ರೂ. ಪರಿಹಾರ ಚೆಕ್ ವಿತರಿಸಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ವೇಣುಗೋಪಾಲ ನಾಯಕ್ ಅವರು ಚೆನ್ನಾಗಿ ಹನುಮ ಜಯಂತಿ ಮಾಡಿದ್ದಾರೆ. ಜಯಂತಿ ವೇಳೆ ಬ್ರಿಗೇಡ್ನಲ್ಲಿ ಇದ್ದವರೇ ಬೈಕ್ ನಿಲ್ಲಿಸುವ ವಿಚಾರಕ್ಕೆ ಹಾಗೂ ಫೋಟೋ ವಿಚಾರಕ್ಕೆ ಗಲಾಟೆ ಮಾಡಿದ್ದಾರೆ. ನಂತರ ಜಗಳ ಅವರೇ ಮಾಡಿದ್ದು, ಆ ವೇಳೆ ಕೊಲೆಯಾಗಿದೆ. ಈ ಕೊಲೆಯಲ್ಲಿ ರಾಜಕೀಯ ಪಿತೂರಿ ಮಾಡಬಾರದು. ಈ ಕೊಲೆ ಪ್ರಕರಣಕ್ಕೆ ಹಿಂದುತ್ವ ಅಜೆಂಡಾ ಫಿಕ್ಸ್ ಮಾಡುವ ಸಂಚನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಇದು ಬಿಜೆಪಿಯವರ ಚಾಳಿ, ಈ ಆಟ ಬಹಳ ದಿನ ನಡೆಯುವುದಿಲ್ಲ ಎಂದು ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದರು.
ಇದನ್ನೂ ಓದಿ : ವೇಣುಗೋಪಾಲ್ ಕೊಲೆ ಪ್ರಕರಣ ಧರ್ಮ, ರಾಜಕೀಯದ ವ್ಯಾಪ್ತಿಗೆ ಬರುವುದಿಲ್ಲ: ಡಾ. ಎಚ್ ಸಿ ಮಹಾದೇವಪ್ಪ