ಚಾಮರಾಜನಗರ : ಬೆಳಗಾವಿ ರಾಜಕಾರಣಿಗಳು ಹಾಗೂ ಅಲ್ಲಿನ ಅಧಿಕಾರಿಗಳು ಸಂಪೂರ್ಣ ಮರಾಠಿಗಳ ಏಜೆಂಟರಾಗಿದ್ದಾರೆ. ಜನಪ್ರತಿನಿಧಿಗಳ ಮಾತು ಮರಾಠಿ, ಮರಾಠಿ ಮತ ಬೇಕು, ರಾಜಕಾರಣಕ್ಕೆ ಕರ್ನಾಟಕ ಬೇಕು ಕನ್ನಡ ಬೇಡ. ಅಧಿಕಾರಿಗಳು ಎಂಇಎಸ್ ವಿರುದ್ಧ ಕೇಸ್ ಹಾಕಲು ಹಿಂದೇಟು ಹಾಕುತ್ತಾರೆ. ಮಾತು ಮಾತ್ರ ಆಡ್ತಾರೆ, ಅವರ ವಿರುದ್ಧ ಕ್ರಮಕೈಗೊಳ್ಳಲ್ಲ ಎಂದು ವಾಟಾಳ್ ನಾಗರಾಜ್ ಕಿಡಿಕಾರಿದರು.
ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಸರ್ಕಾರ ಈ ಹಿಂದೆಯೇ ಎಂಇಎಸ್ ಅನ್ನು ನಿಷೇಧ ಮಾಡಿದ್ದರೇ ಈಗ ಅವರು ಹೊಸ ಭೂಪಟ ರಚಿಸಿ, ಬೆಳಗಾವಿ, ನಿಪ್ಪಾಣಿ, ಕಾರವಾರ ಬೇಕು ಎನ್ನುತ್ತಿರಲಿಲ್ಲ. ಸರ್ಕಾರ ಆ ಕೆಲಸ ಮಾಡದೇ ಕನ್ನಡಿಗರಿಗೆ ದ್ರೋಹ ಎಸಗಿದೆ.
ಈ ಕೂಡಲೇ ಮಹಾರಾಷ್ಟ್ರ ಸರ್ಕಾರಕ್ಕೆ ಸಿಎಂ ಬೊಮ್ಮಾಯಿ ಗಂಭೀರವಾಗಿ ಎಚ್ವರಿಕೆ ಮಾತು ಆಡಬೇಕು. ಬೆಳಗಾವಿಯನ್ನು 3 ಭಾಗಗಳಾಗಿ ವಿಭಜಿಸಲು ಹೊರಟಿರುವುದು ಸರಿಯಲ್ಲ, ಬೆಳಗಾವಿಯನ್ನು ಏನಾದರೂ ವಿಭಜಿಸಿದರೇ ಮುಂದೆ ಅಪಾಯ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಶರದ್ ಪವಾರ್ ಬೆಳಗಾವಿ ಬಗ್ಗೆ ಸ್ಪಷ್ಟ ನಿಲುವು ತಿಳಿಸಲಿ : ಶರದ್ ಪವಾರ್ ಅವರು ಎಸ್ಸಿಪಿ ಕಾರ್ಯಾಲಯವನ್ನು ಬೆಂಗಳೂರಲ್ಲಿ ತೆರೆಯುತ್ತಿದ್ದಾರೆ. ಕೆಲ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಲು ತಯಾರಿಯನ್ನು ಮಾಡಿಕೊಂಡಿದ್ದಾರೆ. ಆದರೆ, ಅದಕ್ಕೂ ಮೊದಲು ಬೆಳಗಾವಿ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸಲಿ. ನಿಲುವು ಸ್ಪಷ್ಟನೆಗೂ ಮುನ್ನ ಕಾರ್ಯಾಲಯ ತೆರೆಯಬಾರದು ಎಂದು ಆಕ್ರೋಶ ಹೊರ ಹಾಕಿದರು.
ಬಿ.ಎಲ್.ಸಂತೋಷ್ ವಿರುದ್ಧ ಕಿಡಿ : ಈಗಿನ ಸಿಎಂ ಬೊಮ್ಮಾಯಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ದರ್ಪ ತೋರದೇ ಜನಪರವಾಗಿದ್ದಾರೆ. ಅಂತಹದರಲ್ಲಿ ಬೊಮ್ಮಾಯಿ ಬದಲಾವಣೆಯ ಮಾತು ಕೇಳಿಬಂದಿದ್ದು ಬೊಮ್ಮಾಯಿ ಅವರನ್ನು ಬದಲಾಯಿಸುವುದು ಸರಿಯಲ್ಲ. ಅದ್ಯಾರೋ ಬಿ.ಎಲ್.ಸಂತೋಷ್ ಆಗಾಗ್ಗೆ ರಾಜ್ಯಕ್ಕೆ ಬಂದು ಏನಾದರೂ ಮಾತನಾಡಿ ಹೋಗುತ್ತಾರೆ, ಬಿ.ಎಲ್.ಸಂತೋಷ್ ಅವರಿಂದ ರಾಜ್ಯಕ್ಕೆ ಏನು ಕೊಡುಗೆ ಇದೆ..? ಈಗಾಗಲೇ ಎರಡು ಮೂರು ಮಂದಿ ಸಿಎಂ ಆಗಿದ್ದಾರೆ. ಈಗ ಬದಲಾವಣೆ ಮಾತು ಆಡಿರುವ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ವಿರುದ್ಧ ಕಿಡಿಕಾರಿದರು.
ಬಂಧನ ವಾರೆಂಟ್ ಬಗ್ಗೆ ಸ್ಪಷ್ಟನೆ : ದೆಹಲಿ ನ್ಯಾಯಾಲಯವು ತಮ್ಮ ವಿರುದ್ಧ ಬಂಧನ ವಾರೆಂಟ್ ಹೊರಡಿಸಿದ್ದರ ಬಗ್ಗೆ ಅವರು ಮಾತನಾಡಿ, ಈ ಹಿಂದೆ ಡಬ್ಬಿಂಗ್ ವಿರೋಧಿಸಿ ಹೋರಾಟದ ವೇಳೆ ಯಾವುದೇ ಕಾರಣಕ್ಕೂ ಡಬ್ಬಿಂಗ್ಗೆ ಸಹಮತ ಇಲ್ಲ ಎಂದು ಹೇಳಿದ್ದೆವು. ಆ ಸಮಯದಲ್ಲಿ ಡಬ್ಬಿಂಗ್ ಪರ ಇರುವವರು ನ್ಯಾಯಾಲಯಕ್ಕೆ ದಾವೆ ಹಾಕಿದ್ದರು. ಕೋರ್ಟ್ಗೆ ಹಾಜರಾಗದಿದ್ದರಿಂದ ಬಂಧನ ವಾರೆಂಟ್ ಜಾರಿ ಮಾಡಿದ್ದಾರೆ. ದೆಹಲಿ ಪೊಲೀಸ್ ಸಿಬ್ಬಂದಿ ನೋಟಿಸ್ ಕೊಟ್ಟಿದ್ದು, ಇದೇ 11ಕ್ಕೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಹೇಳಿದ್ದಾರೆ. ವಕೀಲರುಗಳ ಬಗ್ಗೆ ಚರ್ಚೆ ನಡೆಸುತ್ತಿದ್ದೇನೆ ಎಂದರು.
ಇದನ್ನೂ ಓದಿ: ಶಿಲಾಶಾಸನಗಳನ್ನು ಉಳಿಸುವ ಕೆಲಸ ಮಾಡಬೇಕು: ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್