ಚಾಮರಾಜನಗರ: ದಲಿತ ಮಹಿಳೆಯೊಬ್ಬಳು ಟ್ಯಾಂಕ್ನಲ್ಲಿ ನೀರು ಕುಡಿದರೆಂಬ ಕಾರಣಕ್ಕೆ ಟ್ಯಾಂಕ್ ಖಾಲಿ ಮಾಡಿಸಿ ಸ್ವಚ್ಛಗೊಳಿಸಿರುವ ಅನಾಗರಿಕ ಘಟನೆ ಚಾಮರಾಜನಗರ ತಾಲೂಕಿನ ಹೆಗ್ಗೋಠಾರ ಗ್ರಾಮದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ.
ದಲಿತ ಯುವಕನೊಬ್ಬನ ಮದುವೆ ಸಮಾರಂಭದಲ್ಲಿ ಭಾಗಿಯಾಗಲು ವಧುವಿನ ಕಡೆಯಿಂದ ಹೆಚ್.ಡಿ.ಕೋಟೆ ತಾಲೂಕಿನ ಸರಗೂರಿನಿಂದ ಬಂದಿದ್ದರು. ಮಧ್ಯಾಹ್ನದ ಊಟ ಮುಗಿಸಿ ಬಸ್‌ಗೆ ಹೋಗುವಾಗ ಮಹಿಳೆಯೊಬ್ಬರು ಗ್ರಾಮದ ಹಳೆ ಮಾರಿಗುಡಿ ಬಳಿಯ ಬೀದಿಯಲ್ಲಿನ ತೊಂಬೆಯ ನಲ್ಲಿಯಲ್ಲಿ ನೀರು ಕುಡಿದಿದ್ದರು. ಅದೇ ಬೀದಿಯವರು ಯಾರೋ ಇದನ್ನು ನೋಡಿ ಮಹಿಳೆ ದಲಿತ ಸಮುದಾಯದವಳು ಎಂದು ಗೊತ್ತಾಗುತ್ತಿದ್ದಂತೆ ನೀರನ್ನು ಖಾಲಿ ಮಾಡಿಸಿ ಗಂಜಲ ಹಾಕಿ ತೊಳೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಈ ರೀತಿ ಚರ್ಚೆ ನಡೆಯುತ್ತಿದೆ. ವಿಎ ಹಾಗೂ ಆರ್ಐ ಮೂಲಕ ವರದಿ ತರಿಸಿಕೊಂಡಿದ್ದು, ಘಟನೆ ನಡೆದಿದೆ ಎನ್ನಲು ಈಗಲೇ ನಮ್ಮಲ್ಲಿ ಸಾಕ್ಷ್ಯಗಳಿಲ್ಲ. ಭಾನುವಾರ ಊರಿಗೆ ತೆರಳಿ ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ ಎಂದು ಈ ಸಂಬಂಧ ಚಾಮರಾಜನಗರ ತಹಶೀಲ್ದಾರ್ ಬಸವರಾಜು ಅವರು ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
(ಓದಿ: ಚಿಕ್ಕಮಗಳೂರಲ್ಲಿ ಲವ್ ಜಿಹಾದ್ ಆರೋಪ : ಯುವತಿಯ ಸಹೋದರನಿಂದ ಯುವಕನ ವಿರುದ್ಧ ದೂರು)