ಚಾಮರಾಜನಗರ: ಮಲೆಮಹದೇಶ್ವರ ಬೆಟ್ಟದಲ್ಲಿ ಲಂಚದ ಅಧಿಕಾರಿಗಳು ಎಂದು ಅಪರಿಚಿತನೋರ್ವ ಕರಪತ್ರ ಅಂಟಿಸಿ ತನ್ನ ಆಕ್ರೋಶ ಹೊರಹಾಕಿದ್ದಾನೆ.
ಕಳೆದ ಜಾತ್ರೆಯ ವೇಳೆ ಬೀದಿಬದಿ ವ್ಯಾಪಾರ ಮಾಡಬಾರದೆಂದು ಅಧಿಕಾರಿಗಳು, ತಮಗೆ ಬೇರೆ ವಿಧಿಯಿಲ್ಲವೆಂದು ವ್ಯಾಪಾರಿಗಳು ಹಗ್ಗಜಗ್ಗಾಟ ನಡೆಸಿದ್ದರು. ಬಳಿಕ, ದೇಗುಲ ಮತ್ತು ಅಂಚೆ ಕಚೇರಿಯ ನಡುವಿನ ರಸ್ತೆಬದಿಯಲ್ಲಿ ವ್ಯಾಪಾರವನ್ನು ನಿಷೇಧಿಸಿ ಮಲೆಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಆದೇಶ ಹೊರಡಿಸಿತ್ತು.
ಇದೀಗ, ಅಪರಿಚಿತನೋರ್ವ ಪ್ರಾಧಿಕಾರ ಅಳವಡಿಸಿದ್ದ ಬೋರ್ಡ್ ಮೇಲೆ ಕರಪತ್ರ ಅಂಟಿಸಿ ಆಕ್ರೋಶ ಹೊರಹಾಕಿದ್ದಾನೆ. ಪರ ಊರಿನಿಂದ ಬಂದು ದೇಗುಲದ ಜಾಗದಲ್ಲಿ ಮನೆ ಕಟ್ಟುತ್ತಿದ್ದಾರೆ. ಅಂತವರನ್ನು ಅಧಿಕಾರಿಗಳು ಕೇಳುತ್ತಿಲ್ಲ, ಜೊತೆಗೆ ಗ್ರಾ.ಪಂ. ಅಧಿಕಾರಿ ಲಂಚ ಕೇಳುತ್ತಾರೆ ಎಂದು ಅಪರಿಚಿತನೋರ್ವ ಕರಪತ್ರದಲ್ಲಿ ಆರೋಪಿಸಿದ್ದಾನೆ. ಇನ್ನೂ, ಸಾರ್ವಜನಿಕ ಪ್ರದೇಶದಲ್ಲಿ ಅನಾಮಿಕ ವ್ಯಕ್ತಿ ಕರಪತ್ರ ಅಂಟಿಸಿ 3-4 ದಿನಗಳು ಕಳೆದಿದೆಯೆಂದು ತಿಳಿದುಬಂದಿದೆ. ಪರಿಶೀಲನೆ ಇರಲಿ ಅದನ್ನು ತೆಗೆಯುವ ಗೋಜಿಗೂ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು, ಸಿಬ್ಬಂದಿ ಮುಂದಾಗಿಲ್ಲ.
ಇನ್ನು ದೇಗುಲದ ಜಾಗದಲ್ಲಿ ಮನೆ ಕಟ್ಟುತ್ತಿರುವವರು ಯಾರು, ಎಲ್ಲಿ ಕಟ್ಟುತ್ತಿದ್ದಾರೆ ಎಂಬುದರ ಕುರಿತು ಜಿಲ್ಲಾಡಳಿತ ತನಿಖೆ ನಡೆಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.