ಕೊಳ್ಳೇಗಾಲ: ಹೊಟ್ಟೆನೋವು ತಾಳಲಾರದೆ ಜೀವನದಲ್ಲಿ ಜುಗುಪ್ಸೆಗೊಂಡು ಗೃಹಿಣಿಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಮಹಿಳೆಯು ಬಾವ ಹಾಗೂ ನಾದಿನಿಯ ಹಿಂಸೆಯಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತಳ ಪತಿ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಅ. 21ರಂದು ಪಟ್ಟಣದ ಸಾಯಿಬಾಬಾ ದೇವಸ್ಥಾನದ ಹಿಂಭಾಗದ ಬಡಾವಣೆಯಲ್ಲಿ ವಾಸವಾಗಿದ್ದ ದಂತ ವೈದ್ಯ ಶಿವರಾಜು ಎಂಬುವರ ಪತ್ನಿ ಆಶಾರಾಣಿ ಹೊಟ್ಟೆನೋವು ತಾಳಲಾರದೆ ಮೃತಪಟ್ಟಿದ್ದಾಳೆ ಎಂದು ಆಕೆಯ ತಂದೆ ಕೆಂಪೇಗೌಡ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈ ಸಂಬಂಧ ಘಟನಾ ಸ್ಥಳಕ್ಕೆ ಪಿಎಸ್ಐ ಚೇತನ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುವ ವೇಳೆ ಮೃತಳು ಬರೆದ ನಾಲ್ಕು ಪುಟಗಳ ಡೆತ್ನೋಟ್ ಪತ್ತೆಯಾಗಿದೆ. ಡೆತ್ನೋಟ್ ಪರಿಶೀಲಿಸಿದಾಗ ಮೃತಳ ಅಕ್ಕನ ಗಂಡ ಗ್ರಾಮಾಂತರ ಠಾಣೆಯ ಹೆಡ್ ಕಾನ್ಸ್‌ಟೇಬಲ್ ನಂಜುಂಡೇಗೌಡ ಹಾಗೂ ನಾದಿನಿ ನಾಗಮಣಿ ಸೇರಿದಂತೆ ಇತರರು ಹಿಂಸೆ ನೀಡುತ್ತಿದ್ದರು ಎಂಬುದು ತಿಳಿದು ಬಂದಿದೆ.
ಈ ಹಿನ್ನೆಲೆಯಲ್ಲಿ ವೈದ್ಯ ಶಿವರಾಜು ತನ್ನ ಪತ್ನಿಯ ಸಾವಿಗೆ ಕಾರಣರಾದವರಿಗೆ ಶಿಕ್ಷೆಯಾಗಬೇಕು ಎಂದು ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಹೆಡ್ ಕಾನ್ಸ್‌ಟೇಬಲ್ ನಂಜುಂಡೇಗೌಡ ಹಾಗೂ ನಾದಿನಿ ನಾಗಮಣಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ: ಲಖಿಂಪುರ್ ಖೇರಿ ಹಿಂಸಾಚಾರ ಪ್ರಕರಣ: ಪ್ರಮುಖ ಆರೋಪಿ ಆಶಿಶ್ ಮಿಶ್ರಾಗೆ ಡೆಂಗ್ಯೂ