ಚಾಮರಾಜನಗರ: ಆನೆಯೊಂದು ಅವಳಿ ಮರಿಗಳಿಗೆ ಜನ್ಮ ನೀಡಿದ ತೀರಾ ಅಪರೂಪ ಘಟನೆ ಬಂಡೀಪುರ ಕಾಡಲ್ಲಿ ನಡೆದಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಬಂಡೀಪುರ ವಲಯದ ಮೂರ್ಕೆರೆ ದಾರಿ ಎಂಬಲ್ಲಿ ನೀರಿನ ಹೊಂಡ ಸಮೀಪ ಎರಡು ಮರಿಗಳೊಂದಿಗೆ ಆನೆ ಕಾಣಸಿಕೊಳ್ಳುವ ಮೂಲಕ ಅವಳಿ ಮರಿ ಜನನದ ಅಪರೂಪದ ಘಟನೆ ಬೆಳಕಿಗೆ ಬಂದಿದೆ.
ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಆನೆ ಅವಳಿ ಮರಿಗಳಿಗೆ ಜನ್ಮ ನೀಡಿರುವ ಸಾಧ್ಯತೆ ಇದೆ. ಇದೇ ಮೊದಲ ಬಾರಿಗೆ ಬಂಡೀಪುರದಲ್ಲಿ ಆನೆಯೊಂದು ಅವಳಿ ಮರಿಗಳಿಗೆ ಜನ್ಮ ನೀಡಿರುವುದು ಗೊತ್ತಾಗಿರುವುದು ಎನ್ನಲಾಗ್ತಿದೆ. ಘಟನೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಅಲ್ಲಿನ ಆರ್ಎಫ್ಓ ನವೀನ್ ಕುಮಾರ್ ಅವರನ್ನು ಸಾಕಷ್ಟು ಬಾರಿ ಸಂಪರ್ಕಿಸಿದರೂ ಕರೆ ಸ್ವೀಕರಿಸಲಿಲ್ಲ.
ಅಪರೂಪದ ಘಟನೆ ಹೇಗೆ: ಸಸ್ತನಿ ಗುಂಪಿಗೆ ಸೇರುವ ಆನೆ ಬರೋಬ್ಬರಿ ಹತ್ತಿರ ಹತ್ತಿರ ಎರಡು ವರ್ಷ ಗರ್ಭ ಧರಿಸಿರುತ್ತದೆ. ಭಾರಿ ಗಾತ್ರದ ಪ್ರಾಣಿಯಾಗಿರುವುದರಿಂದ ಉಳಿದ ಸಸ್ತನಿಗಳಾದ ಹುಲಿ, ಚಿರತೆಯಂತೆ 4-5 ಮರಿಗಳಿಗೆ ಜನ್ಮ ನೀಡದೇ ಒಂದೇ ಮರಿಗೆ ಮಾತ್ರ ಜನ್ಮ ನೀಡಲಿದೆ. ಆನೆಗಳಲ್ಲಿ ಅವಳಿ ಮರಿಗಳಾಗುವುದು ತೀರಾ ಅಪರೂಪವೇ ಆಗಿರುತ್ತದೆ.
ಒಟ್ಟಿನಲ್ಲಿ ತಾಯಿ ಆರೈಕೆಯಲ್ಲಿ ಮರಿಗಳು ನಿಸರ್ಗದ ಚೆಲುವಲ್ಲಿ ಮಿಂದೇಳುತ್ತಿವೆ. ತಾಯಿ ತನ್ನ ಮರಿಗಳ ಲಾಲನೆಯಲ್ಲಿ ತೊಡಗಿದ್ದು, ಮೇಲ್ನೋಟಕ್ಕೆ ಆರೋಗ್ಯವಾಗಿವೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಅವಳಿ ಮರಿಗಳಿಗೆ ಜನ್ಮ ನೀಡಿದ ಆನೆ: ಶ್ರೀಲಂಕಾದಲ್ಲಿ ಅಪರೂಪದ ವಿಸ್ಮಯ