ಹೊಸ ವರ್ಷ: ಚಾಮರಾಜನಗರಕ್ಕೆ ಹರಿದು ಬಂದ ಪ್ರವಾಸಿಗರ ದಂಡು - Male Mahadeshwar hill
ಹೊಸ ವರ್ಷ ಹಿನ್ನೆಲೆ ಚಾಮರಾಜನಗರದ ಧಾರ್ಮಿಕ ಕ್ಷೇತ್ರಗಳು ಮತ್ತು ಪ್ರವಾಸಿ ಸ್ಥಳಗಳಿಗೆ ಪ್ರವಾಸಿಗರು ಭಾರೀ ಸಂಖ್ಯೆಯಲ್ಲಿ ಭೇಟಿ ನೀಡಿದ್ದರು.
Published : Jan 1, 2024, 10:21 PM IST
|Updated : Jan 1, 2024, 10:50 PM IST
ಚಾಮರಾಜನಗರ: ಹೊಸ ವರ್ಷಾಚರಣೆ ಹಿನ್ನೆಲೆ ಸೋಮವಾರ (ಜ.1) ಗಡಿಜಿಲ್ಲೆ ಚಾಮರಾಜನಗರದ ಧಾರ್ಮಿಕ ಕ್ಷೇತ್ರಗಳು ಮತ್ತು ಪ್ರವಾಸಿ ಸ್ಥಳಗಳಿಗೆ ಜನ ಸಾಗರವೇ ಹರಿದುಬಂದಿತ್ತು. ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಭಾನುವಾರ ರಾತ್ರಿಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ, ದೇವರ ದರ್ಶನ ಪಡೆದು ಪ್ರಾರ್ಥಿಸಿದರು. ಇನ್ನು ದೇವರಿಗೆ ಚಿನ್ನದ ರಥ, ಬೆಳ್ಳಿ ರಥ ಹಾಗೂ ಬಸವ ವಾಹನ ಸೇವೆ ನೆರವೇರಿತು. ದೇವಸ್ಥಾನ ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿತು. ದೇವಸ್ಥಾನದ ಪ್ರಾಂಗಣ, ಗರ್ಭಗುಡಿಗೆ ಮಾಡಿದ್ದ ಹೂವಿನ ಅಲಂಕಾರ ಎಲ್ಲರ ಗಮನ ಸೆಳೆಯಿತು.
ಹೊಗೆನಕಲ್ ಜಲಪಾತಕ್ಕೆ ಹರಿದು ಬಂದ ಪ್ರವಾಸಿಗರ ದಂಡು: ಭಾರತದ ನಯಾಗರ ಎಂದೇ ಹೆಸರುವಾಸಿಯಾಗಿರುವ ಹೊಗೆನಕಲ್ ಜಲಪಾತವನ್ನು ಸಾವಿರಾರು ಪ್ರವಾಸಿಗರು ಕಣ್ತುಂಬಿಕೊಂಡು ಸಂತಸಪಟ್ಟರು. ಕರ್ನಾಟಕ, ತಮಿಳುನಾಡು ಸೇರಿದಂತೆ ವಿವಿಧೆಡೆಗಳಿಂದ ಆಗಮಿಸಿದ್ದ ಪ್ರವಾಸಿಗರು ಕಾವೇರಿ ನದಿಯಲ್ಲಿ ತೆಪ್ಪ ಸವಾರಿ ಮಾಡಿ ಖುಷಿಪಟ್ಟರು.
ಬಿಳಿಗಿರಿ ಪ್ರಕೃತಿ ಸೌಂದರ್ಯ ಕಣ್ತುಂಬಿಕೊಂಡ ಪ್ರವಾಸಿಗರು: ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನಾಥ ಬೆಟ್ಟಕ್ಕೆ ಭಕ್ತರು ಹಾಗೂ ಪ್ರವಾಸಿಗರು ಭಾರೀ ಸಂಖ್ಯೆಯಲ್ಲಿ ಆಗಮಿಸಿದ್ದರು. ಬೆಂಗಳೂರಿನಿಂದ ಲಾಂಗ್ ರೈಡ್ನಲ್ಲಿ ಬಂದ ನೂರಾರು ಪ್ರವಾಸಿಗರು ಬಿಳಿಗಿರಿ ಕಾಡಿ ಪ್ರಕೃತಿ ಸೌಂದರ್ಯ ಕಂಡು ಪುಳಕಿತರಾದರು. ಬಿಳಿಗಿರಿರಂಗನಾಥ ದೇವಸ್ಥಾನಕ್ಕೆ ಭೇಟಿ ನೀಡಿದ ಭಕ್ತರು ದೇವರ ದರ್ಶನ ಪಡೆದರು. ಇನ್ನು ಕೆ. ಗುಡಿಯಲ್ಲಿ ಪ್ರಕೃತಿ ಸೊಬಗನ್ನು ಕಣ್ತುಂಬಿಕೊಂಡ ಪ್ರವಾಸಿಗರು ಸೆಲ್ಫಿ ಕ್ಲಿಕ್ಕಿಸಿಕೊಂಡರು.
ಗೋಪಾಲನ ಸನ್ನಿದಿಯಲ್ಲಿ ವರ್ಷಾಚರಣೆ: ಕರ್ನಾಟಕದ ಕಾಶ್ಮೀರ ಎನಿಸಿಕೊಂಡಿರುವ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದು, ಹೊಸ ವರ್ಷವನ್ನು ಆಚರಿಸಿದರು.
ಚಾಮರಾಜೇಶ್ವರ ದೇಗುಲ: ಚಾಮರಾಜನಗರದ ಚಾಮರಾಜೇಶ್ವರ ದೇಗುಲಕ್ಕೆ ಇಂದು ಆಗಮಿಸಿದ್ದ ಭಕ್ತರು, ದೇವರ ದರ್ಶನ ಪಡೆದು ಇಷ್ಟಾರ್ಥ ಸಿದ್ಧಿಗೆ ಬೇಡಿಕೊಂಡರು.
ಇದನ್ನೂ ಓದಿ: ಹೊಸ ವರ್ಷಾಚರಣೆ: ಎಂಜಿ, ಬ್ರಿಗೇಡ್ ರಸ್ತೆಯಲ್ಲಿ 8 ಮೆಟ್ರಿಕ್ ಟನ್ ತ್ಯಾಜ್ಯ ತೆರವುಗೊಳಿಸಿದ ಪಾಲಿಕೆ