ಗುಂಡ್ಲುಪೇಟೆ : ಬಂಡೀಪುರದ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದ ಕುಂದುಕೆರೆ ವಲಯದಲ್ಲಿ ಹುಲಿಯೊಂದು ಶನಿವಾರ ಒಂದೇ ದಿನ ಮೂರು ಹಸು ಹಾಗೂ ಎರಡು ಮೇಕೆಯನ್ನು ಬೇಟೆಯಾಡಿದೆ.
ತಾಲೂಕಿನ ಕಡಬೂರು ಗ್ರಾಮದ ರತ್ನಮ್ಮ ಎಂಬುವರಿಗೆ ಸೇರಿದ ಮೂರು ಹಸುಗಳು ಮತ್ತು ಬಸಪ್ಪ ಅವರಿಗೆ ಸೇರಿದ ಎರಡು ಮೇಕೆಗಳ ಮೇಲೆ ದಾಳಿ ಮಾಡಿದೆ. ಜಮೀನಿನಲ್ಲಿ ಮೇಯುತ್ತಿದ್ದ ವೇಳೆ ಹುಲಿ ದಾಳಿ ಮಾಡಿದೆ. ಸ್ಥಳಕ್ಕೆ ಹುಲಿ ಯೋಜನೆ ನಿರ್ದೇಶಕ ಟಿ ಬಾಲಚಂದ್ರ, ಎಸಿಎಫ್ ಕೆ.ಪರಮೇಶ್ ಹಾಗೂ ಶಾಸಕ ಸಿ ಎಸ್ ನಿರಂಜನ್‌ಕುಮಾರ್ ಭೇಟಿ ನೀಡಿ ಮಾಹಿತಿ ಪಡೆದರು. ಪರಿಹಾರ ನೀಡುವುದಾಗಿಯೂ ಘೋಷಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಕಡಬೂರು ಮಂಜುನಾಥ್, ಕಳೆದ ಒಂದು ತಿಂಗಳ ಅವಧಿಯಲ್ಲಿ ಹುಲಿ 16 ಜಾನುವಾರು ಮತ್ತು 10ಕ್ಕೂ ಹೆಚ್ಚಿನ ಮೇಕೆಗಳ ಮೇಲೆ ದಾಳಿ ಮಾಡಿದೆ. ಪ್ರಾಣಿ ಹಾಗೂ ಮಾನವನ ಸಂಘರ್ಷ ಕಡಿಮೆಯಾಗುವ ನಿಟ್ಟಿನಲ್ಲಿ ಶಾಶ್ವತವಾದ ಪರಿಹಾರ ಕಂಡುಕೊಳ್ಳಬೇಕು. ರೈಲ್ವೆ ಬೇಲಿ ಹಾಕಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಸ್ಪಂದಿಸಿದ ಶಾಸಕರು ಮತ್ತು ಅಧಿಕಾರಿಗಳು, ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದರು. ಇದೇ ವೇಳೆ ಹುಲಿ ಸೆರೆಗೆ ಬೋನು ಸಹ ಅಳವಡಿಸಲಾಯಿತು.