ಗುಂಡ್ಲುಪೇಟೆ: ಗುಂಡ್ಲುಪೇಟೆ ಪಟ್ಟಣದ ಜಾಕೀರ್ ಹುಸೇನ್ ನಗರದಲ್ಲಿ ಮಂಗಳವಾರ ರಾತ್ರಿ ಎರಡು ಗುಂಪುಗಳ ನಡುವೆ ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ನಡೆದ ಘರ್ಷಣೆಯಲ್ಲಿ ನಾಲ್ವರು ಕೊಲೆಯಾಗಿದ್ದಾರೆ.
ಇದ್ರಿಸ್ (30), ಕೈಸರ್ (30), ಜಕ್ಕಾವುಲ್ಲಾ (35) ಮತ್ತು ನಸ್ರುಲ್ಲಾ ಕೊಲೆಗೀಡಾದ ದುರ್ದೈವಿಗಳೆಂದು ತಿಳಿದು ಬಂದಿದೆ. ತೀವ್ರವಾಗಿ ಗಾಯಗೊಂಡಿದ್ದ ನಸ್ರುಲ್ಲಾ ಎಂಬಾತ, ಮೈಸೂರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ.
ಅಸ್ಲಾಂ ಮತ್ತು ಜಮೀರ್ ಸಂಗಡಿಗರು ಮೂವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಎರಡು ಕುಟುಂಬದ ನಡುವೆ ಹಿಂದಿನಿಂದಲೂ ದ್ವೇಷವಿದ್ದು, ಗಲಾಟೆ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣ ಸಹ ನಡೆಯುತ್ತಿತ್ತು.
ಕೊಲೆಗೀಡಾದ ಇದ್ರಿಸ್, ಕೈಸರ್ ಹಾಗೂ ಜಕ್ಕಾವುಲ್ಲಾ ಕುಟುಂಬದವರು ಅಸ್ಲಾಂ ಮತ್ತು ಜಮೀರ್ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಮಂಗಳವಾರ ರಾತ್ರಿ ಕ್ಷುಲ್ಲಕ ಕಾರಣಕ್ಕೆ ಮತ್ತೆ ಎರಡು ಗುಂಪುಗಳ ನಡುವೆ ಮಾರಾಮಾರಿ ಏರ್ಪಟ್ಟಿದ್ದು, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆದಾಟ ನಡೆದಿದೆ ಎನ್ನಲಾಗಿದೆ.
ಇವರ ಗಲಾಟೆ ಸಂಬಂಧ ನ್ಯಾಯಾಲದಲ್ಲಿ ಪ್ರಕರಣ ನಡೆಯುತ್ತಿತ್ತು. ಅಂದಿನಿಂದ ಎರಡೂ ಕುಟುಂಬದವರು ದ್ವೇಷ ಸಾಧಿಸುತ್ತ ಬರುತ್ತಿದ್ದರು ಎನ್ನಲಾಗುತ್ತಿದೆ. ಘಟನೆಯ ಬಳಿಕ ಇಡೀ ಬಡಾವಣೆ ಪ್ರಕ್ಷುಬ್ಧಗೊಂಡಿದ್ದು, ಸ್ಥಳೀಯ ನಿವಾಸಿಗರು ಆತಂಕಗೊಂಡಿದ್ದಾರೆ. ಬಡಾವಣೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.