ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಇಂದು ಮೂರು ಚಿರತೆಗಳ ಶವ ಪತ್ತೆಯಾಗಿದೆ. ಕುಂದಕೆರೆ ಅರಣ್ಯ ವಲಯದ ಕಣಿಯನಪುರ ಗ್ರಾಮದ ಸಮೀಪ ಒಂದು ಹಾಗೂ ಜಿ.ಎಸ್. ಬೆಟ್ಟ ವಲಯ ವ್ಯಾಪ್ತಿಯ ಮಂಗಲ ಗ್ರಾಮದಲ್ಲಿ ಮತ್ತೊಂದು ಚಿರತೆಯ ಶವ ದೊರೆತಿದೆ. ಸಾವಿಗೆ ನಿಖರ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ. ಕಣಿಯನಪುರ ಗ್ರಾಮಕ್ಕೆ ಅರಣ್ಯಾಧಿಕಾರಿಗಳು ಭೇಟಿ ಕೊಟ್ಟು ಪರಿಶೀಲನೆ ನಡೆಸುತ್ತಿದ್ದಾರೆ.
ವಿಷಪೂರಿತ ಮಾಂಸ ತಿಂದು ಮತ್ತೊಂದು ಚಿರತೆ ಸಾವು: ಮತ್ತೊಂದು ಘಟನೆಯಲ್ಲಿ ಗುಂಡ್ಲುಪೇಟೆ ಬಫರ್ ವಲಯದ ಕೂತನೂರು ಗ್ರಾಮದ ಜಮೀನಿನಲ್ಲಿ ವಿಷಪೂರಿತ ಮಾಂಸ ತಿಂದು 3 ವರ್ಷದ ಚಿರತೆ ಮೃತಪಟ್ಟಿದೆ. ಜಿ.ಆರ್. ಗೋವಿಂದರಾಜ ಎಂಬವರ ಜಮೀನಿನಲ್ಲಿ ಘಟನೆ ನಡೆದಿದೆ. ಸಾಕು ನಾಯಿಯನ್ನು ಚಿರತೆ ಬೇಟೆಯಾಡಿ ಹೋಗಿತ್ತು. ಉಳಿದ ಕಳೇಬರಕ್ಕೆ ಜಮೀನಿನ ಕಾವಲುಗಾರ ಸೋಮಶೇಖರ್ ಕೀಟನಾಶಕ ಸಿಂಪಡಿಸಿ ಇರಿಸಿದ್ದರು ಎಂದು ತಿಳಿದುಬಂದಿದೆ.
ಉಳಿದ ಬೇಟೆ ತಿನ್ನಲು ಬಂದ ಚಿರತೆ ವಿಷಪೂರಿತ ಮಾಂಸ ತಿಂದು ಅಸುನೀಗಿದೆ. ಹೆಣ್ಣು ಚಿರತೆ ಸಾವಿಗೀಡಾಗಿದೆ ಎಂದು ಬಂಡೀಪುರ ಸಿಎಫ್ಒ ರಮೇಶ್ ಕುಮಾರ್ ಮಾಹಿತಿ ನೀಡಿದರು. ವಿಷ ಹಾಕಿದ್ದ ಕಾವಲುಗಾರ ಸೋಮಶೇಖರ್‌ನನ್ನು ಅರಣ್ಯಾಧಿಕಾರಿಗಳು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕಣಿಯನಪುರ ಹಾಗೂ ಮಂಗಲ ಗ್ರಾಮದಲ್ಲಿ ಚಿರತೆಗಳ ಸಾವಿನ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.
ಇದನ್ನೂ ಓದಿ: ಮಂಗಳೂರಿನ ಕಿನ್ನಿಗೋಳಿಯಲ್ಲಿ ಉರುಳಿಗೆ ಸಿಲುಕಿ ಪ್ರಾಣ ಬಿಟ್ಟ ಚಿರತೆ