ಚಾಮರಾಜನಗರ: ಮೃತ ಅಭಿಮಾನಿ ಮನೆಗೆ ಭೇಟಿ ನೀಡಿದ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ನೋಡಲು ಗುಂಡ್ಲುಪೇಟೆ ವಿವಿಧ ಊರುಗಳಿಂದ ಸಾವಿರಾರು ಜನರು ಆಗಮಿಸಿದ್ದರು. ಸಿಎಂ ಪದವಿಯಿಂದ ಇಳಿದ ಬಳಿಕ ಕೈಗೊಂಡ ಮೊದಲ ಪ್ರವಾಸದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿ ರಾಜಾಹುಲಿ ಎಂದು ಘೋಷಣೆ ಕೂಗಿದರು.
ದಾರಿಯುದ್ದಕ್ಕೂ ಸಿಗುವ ಗ್ರಾಮಗಳಲ್ಲಿ ಯಡಿಯೂರಪ್ಪ ಅವರನ್ನು ನೋಡಲು ಜನರು ಸಾಲುಗಟ್ಟಿ ನಿಂತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಯಡಿಯೂರಪ್ಪ ಹೋದಲ್ಲೆಲ್ಲಾ ರಾಜಾಹುಲಿ, ಜನಪ್ರಿಯ ಸಿಎಂ ಎಂಬ ಘೋಷಣೆಗಳು ಕೇಳಿ ಬರುತ್ತಿವೆ.
ಕೋವಿಡ್ ನಿಯಮ ಮರೆತ ಜನ
ಪುತ್ರ ವಿಜಯೇಂದ್ರ ಜೊತೆಗೆ ಮೃತ ಅಭಿಮಾನಿ ಮನೆಗೆ ಭೇಟಿ ನೀಡಿದ ಯಡಿಯೂರಪ್ಪ ಅವರ ಪ್ರವಾಸ ಕಾರ್ಯಕ್ರಮದಲ್ಲಿ ಕೋವಿಡ್ ನಿಯಮ ಮಾಯವಾಗಿತ್ತು. ಯಡಿಯೂರಪ್ಪ ಅವರನ್ನು ಬಿಟ್ಟರೆ ಉಳಿದರ್ಯಾರು ಮಾಸ್ಕ್ ಹಾಕಿರಲಿಲ್ಲ, ಸಾಮಾಜಿಕ ಅಂತರವಂತೂ ದೂರದ ಮಾತಾಗಿತ್ತು. ಇದರ ಜೊತೆ ಯಡಿಯೂರಪ್ಪ ಅವರಿಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಿದ್ದರಿಂದ ಮೈಸೂರು - ಊಟಿ ರಸ್ತೆಯಲ್ಲಿ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿ ಸಂಚಾರ ಅಸ್ತವ್ಯಸ್ತವಾಗಿತ್ತು.