ಚಾಮರಾಜನಗರ: ಜಿಲ್ಲೆಯ ಆಸ್ಪತ್ರೆಗಳಲ್ಲಿ ಬೆಡ್ ಕೊರತೆ ಇಲ್ಲ. ಜೊತೆಗೆ ಆಕ್ಸಿಜನ್ ಕೊರತೆಯೂ ಇಲ್ಲ. ಈ ಬಾರಿ ಜಿಲ್ಲಾಸ್ಪತ್ರೆಯನ್ನು ಸಂಪೂರ್ಣ ಕೋವಿಡ್ ಆಸ್ಪತ್ರೆಯನ್ನಾಗಿ ಮಾರ್ಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ. ಆರ್ ರವಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾಸ್ಪತ್ರೆಯನ್ನು ಸಂಪೂರ್ಣ ಕೋವಿಡ್ ಆಸ್ಪತ್ರೆಯನ್ನಾಗಿ ಮಾರ್ಪಡಿಸಲು ನಾಳೆ ಆದೇಶ ಹೊರಬೀಳಲಿದೆ. ಇದರಿಂದ ಹೆಚ್ಚುವರಿಯಾಗಿ 150 ಬೆಡ್ ಸೌಲಭ್ಯ ಲಭ್ಯವಾಗಲಿದೆ. ಜಿಲ್ಲಾಸ್ಪತ್ರೆಯನ್ನು ಕೊರೊನಾದ ಗಂಭೀರ ಪ್ರಕರಣಗಳ ಚಿಕಿತ್ಸೆಗೆ ಬಳಸಿಕೊಳ್ಳಲಾಗುವುದು ಎಂದರು.
ಜಿಲ್ಲಾಸ್ಪತ್ರೆಯಲ್ಲಿರುವ ಕೊರೊನೇತರರನ್ನು ಜೆಎಸ್ಎಸ್ ಆಸ್ಪತ್ರೆಗೆ ವರ್ಗಾಯಿಸಿ ಅಲ್ಲಿನ ಮೂಲಸೌಕರ್ಯವನ್ನು ಬಳಸಿಕೊಂಡು ಚಿಕಿತ್ಸೆ ನೀಡುವ ತೀರ್ಮಾನ ಕೈಗೊಳ್ಳಲಾಗಿದೆ. ಆದರೆ, ಕೊರೊನಾ ಸೋಂಕಿತರಾಗಿ ಜೀವ ರಕ್ಷಕವಾಗಿ ಕೆಲಸ ಮಾಡುವ ರೆಮ್ಡಿಸಿವರ್ ಕೇವಲ 100 ವಯಲ್ಸ್ ಇದ್ದು ಎರಡು ದಿನಗಳಿಗೆ ಸಾಕಾಗಲಿದೆ. ಈ ಕುರಿತು ಸರ್ಕಾರದ ಗಮನಕ್ಕೆ ತಂದಿದ್ದು ಶೀಘ್ರ ಪೂರೈಕೆಯಾಗಲಿದೆ ಎಂದು ಮಾಹಿತಿ ನೀಡಿದರು.
ಜೀವದ ಮೇಲೆ ಆಸೆ ಇದ್ದವರು ಲಸಿಕೆ ಪಡೆಯಿರಿ:
ಜನರಲ್ಲಿರುವ ಉದಾಸೀನತೆ ಮತ್ತು ನಿರ್ಲಕ್ಷ್ಯ ಮನೋಭಾವದಿಂದ ಜಿಲ್ಲೆಯಲ್ಲಿ ಕೊರೊನಾ ಸೋಂಕು ವೇಗವಾಗಿ ಹರಡುತ್ತಿದೆ. ಕಳೆದ ಬಾರಿಗಿಂತ ಈ ಬಾರಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಕಳೆದ 15 ದಿನಗಳಲ್ಲಿ ಹೆಚ್ಚಿನ ಪ್ರಕರಣಗಳು ಪತ್ತೆಯಾಗಿವೆ. ಜನರು ಕೋವಿಡ್ ನಿಯಮವನ್ನು ಪಾಲಿಸುವ ಮೂಲಕ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು. ಇಲ್ಲದಿದ್ದರೆ ಅಂತವರ ವಿರುದ್ದ ಎಫ್ಐಆರ್ ಕೇಸ್ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.
ಜೀವದ ಮೇಲೆ ಯಾರಿಗೆ ಆಸೆ ಇದೆಯೋ ಅವರೆಲ್ಲಾ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕು. ವ್ಯಾಕ್ಸಿನ್ ಹಾಕಿಸಿಕೊಳ್ಳುವುದು ಜೀವದ ರಕ್ಷಣೆಗಾಗಿ. ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮವಿಲ್ಲ. ಅದು ಜೀವ ರಕ್ಷಣೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸಲಿದೆ. ಜನರು ಲಸಿಕೆಯ ಬಗ್ಗೆ ತಪ್ಪುಅಭಿಪ್ರಾಯ ತಾಳಬಾರದು ಎಂದು ಸಲಹೆ ನೀಡಿದರು.
45 ವರ್ಷ ತುಂಬಿದ ಎಲ್ಲ ಸರ್ಕಾರಿ ನೌಕರರು ಇನ್ನು ಮೂರು ದಿನಗಳಲ್ಲಿ ಲಸಿಕೆ ಹಾಕಿಸಿಕೊಳ್ಳುವಂತೆ ಸೂಚಿಸಲಾಗಿದೆ ಎಂದ ಅವರು, ಜಿಲ್ಲಾ ಕೇಂದ್ರದಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ 85 ಹಾಸಿಗೆ ಸೌಲಭ್ಯವುಳ್ಳ ಕೋವಿಡ್ ಕೇರ್ ಸೆಂಟರ್ ತೆರೆಯಲಾಗುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಇದನ್ನೂ ಓದಿ: ಮೈಸೂರಿನ ಸೈಯದ್ ಇಸಾಕ್ ಲೈಬ್ರರಿ ಬೆಂಕಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್.. ಸಿಸಿಟಿವಿಯಿಂದ ಬಯಲಾಯ್ತು ಸತ್ಯ