ಚಾಮರಾಜನಗರ: ಜಿಲ್ಲೆಯಲ್ಲಿ ಕೊರೊನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರದಲ್ಲಿ ಸರ್ಕಾರದ ನಿಯಮ ಗಾಳಿಗೆ ತೂರಿ 100ಕ್ಕೂ ಹೆಚ್ಚು ಮಂದಿ ಭಾಗವಹಿಸುತ್ತಿದ್ದಾರೆ.
ಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಕ್ರಿಯೆ ನಡೆಸಲು ಆತನ ಸಂಬಂಧಿಕರು ಸ್ಥಳ ಗುರುತಿಸಿದ ನಂತರವೇ ತಾಲೂಕು ಆಡಳಿತ ಒಪ್ಪಿಗೆ ನೀಡಬೇಕು. ಆದರೆ, ಜಿಲ್ಲೆಯಲ್ಲಿ ಇದ್ಯಾವುದು ಕ್ರಮಬದ್ಧವಾಗಿ ನಡೆಯುತ್ತಿಲ್ಲ. ಅಂತ್ಯಸಂಸ್ಕಾರ ನಡೆಯುವ ವೇಳೆ ನಿಯಮಗಳ ಕಡ್ಡಾಯ ಪಾಲನೆಗೆ ಸ್ಥಳೀಯ ಗ್ರಾ.ಪಂ. ಪಿಡಿಒ, ಅಧಿಕಾರಿಗಳು ಸೂಚನೆ ನೀಡಬೇಕಾಗಿದ್ದರೂ ಸಹ ಯಾವೊಬ್ಬ ಅಧಿಕಾರಿಗಳು ಆ ಸಂದರ್ಭ ಹಾಜರಿರುತ್ತಿಲ್ಲ ಎನ್ನಲಾಗ್ತಿದೆ.
ಅಂತ್ಯಸಂಸ್ಕಾರಕ್ಕೆ ಬಂದ ಸ್ನೇಹಿತರು, ಸಂಬಂಧಿಕರು ಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ಶವವನ್ನು ಬರಿಗೈಲಿ ಮುಟ್ಟುತ್ತಿರುವ ಘಟನೆಗಳು ಬೆಳಕಿಗೆ ಬರುತ್ತಿವೆ. ಇದಕ್ಕೆ ನಿದರ್ಶನವೆಂಬಂತೆ ಗುಂಡ್ಲುಪೇಟೆ ತಾಲೂಕಿನ ಕೆಬ್ಬೇಪುರ ಗ್ರಾಮದಲ್ಲಿ ಕೋವಿಡ್‍ಗೆ ಬಲಿಯಾದ ವ್ಯಕ್ತಿಯ ದೇಹವನ್ನು ಮೆರವಣಿಗೆ ಮಾಡಿ ಅಂತ್ಯಕ್ರಿಯೆ ನಡೆಸಿದ್ದಾರೆ. ಇಲ್ಲಿ ಕೋವಿಡ್ ನಿಯಮಗಳು ಉಲ್ಲಂಘನೆ ಆಗಿರುವುದು ಗೊತ್ತಾಗುತ್ತದೆ. ಮನೆ ಮನೆಗೂ ಕೋವಿಡ್ ಹರಡುವ ಆತಂಕವೂ ಎದುರಾಗಿದೆ.
ಮೊದಲೇ ಗ್ರಾಮೀಣ ಭಾಗದಲ್ಲಿ ಕೊರೊನಾ ವ್ಯಾಪಿಸುತ್ತಿದ್ದು, ಮರಣ ಪ್ರಮಾಣವೂ ಹೆಚ್ಚಾಗಿದೆ. ಈ ಹೊತ್ತಿನಲ್ಲಿ ತೀವ್ರ ಎಚ್ಚರಿಕೆಯಿಂದ ಇರಬೇಕಾದ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಇದಕ್ಕೂ ತಮಗೂ ಸಂಬಂಧವೇ ಇಲ್ಲದಂತೆ ಮೌನ ವಹಿಸಿದೆ ಎಂಬ ಆರೋಪಗಳು ಕೇಳಿಬಂದಿವೆ. ವ್ಯಕ್ತಿ ಕಳೆದುಕೊಂಡ ದುಃಖದಲ್ಲಿ ಸಂಬಂಧಿಕರು ಬರಿಗೈಯಲ್ಲೇ ಶವ ಮುಟ್ಟುವುದು, ನೂರಾರು ಮಂದಿ ಜಮಾಯಿಸುವುದಕ್ಕೆಲ್ಲಾ ಇನ್ನಾದರೂ ಬ್ರೇಕ್ ಹಾಕಬೇಕಿದೆ.
ಇದನ್ನೂ ಓದಿ: ₹1,250 ಕೋಟಿ ವೆಚ್ಚದ ಆರ್ಥಿಕ ಪ್ಯಾಕೇಜ್ ಘೋಷಿಸಿದ ಬಿಎಸ್‌ವೈ.. ಅಸಂಘಟಿತ ಕಾರ್ಮಿಕರು, ರೈತರಿಗೆ ಸಿಕ್ಕಿದ್ದು,ದಕ್ಕಿದ್ದೆಷ್ಟು?