ಚಾಮರಾಜನಗರ : ವಿದ್ಯಾರ್ಥಿಗಳು, ರೈತರು, ಹಲವು ಹೋರಾಟಗಾರರ ಫಲವಾಗಿ ಸ್ಥಳಾಂತರದ ಭೀತಿ ಎದುರಿಸಿದ್ದ ಹನೂರು ಹಾಗೂ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಕಾಲೇಜುಗಳು ಜಿಲ್ಲೆಯಲ್ಲೇ ಮುಂದುವರೆಯಲಿವೆ.
ಅಗತ್ಯ ಸಂಖ್ಯೆಯ ವಿದ್ಯಾರ್ಥಿಗಳ ಕೊರತೆ ಎಂದು ಹನೂರು ತಾಲೂಕಿನ ಹನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ಬೇರೆ ಜಿಲ್ಲೆಗೆ ಸ್ಥಳಾಂತರಿಸಲಾಗಿತ್ತು. ತೆರಕಣಾಂಬಿ ಕಾಲೇಜು ಉಳಿವಿಗೆ ನಿರಂತರ ಚಳವಳಿಯೂ ನಡೆದು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ವಿಚಾರ ತರಲಾಗಿತ್ತು.
ಕಾಲೇಜುಗಳು ಅಗತ್ಯತೆಯನ್ನು ಮನಗಂಡ ಉಸ್ತುವಾರಿ ಸಚಿವ ಹಾಗೂ ಶಿಕ್ಷಣ ಸಚಿವ ಸುರೇಶ್ ಕುಮಾರ್ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಕಾಲೇಜುಗಳನ್ನು ಮುಂದುವರೆಸಬೇಕೆಂದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ್ ನಾರಾಯಣ್ ಅವರಿಗೆ ಮನವಿ ಸಲ್ಲಿಸಿದ್ದರು.
ಸಚಿವರ ಮನವಿಗೆ ಸ್ಪಂದಿಸಿರುವ ಅಶ್ವತ್ಥ ನಾರಾಯಣ ಎರಡೂ ಕಾಲೇಜುಗಳನ್ನು ಅದೇ ಸ್ಥಳಗಳಲ್ಲಿ ಮುಂದುವರೆಸಲು ಸಮ್ಮತಿಸಿದ್ದು, ಈ ಕುರಿತು ಕಾಲೇಜು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಇನ್ನು ಈ ಕುರಿತು ಸಚಿವ ಸುರೇಶ್ ಕುಮಾರ್ ಪತ್ರಿಕಾ ಪ್ರಕಟಣೆ ಹೊರಡಿಸಿ ತೆರಕಣಾಂಬಿ ಪ್ರಥಮ ದರ್ಜೆ ಕಾಲೇಜನ್ನು ಮೈಸೂರು ವಿಶ್ವವಿದ್ಯಾನಿಲಯವು ಘಟಕ ಕಾಲೇಜಾಗಿ ಪಡೆದುಕೊಂಡಿದ್ದು, ಕಾಲೇಜು ಅಭಿವೃದ್ಧಿಗೆ ಹೆಚ್ಚಿನ ಅವಕಾಶವಾಗಲಿದೆ ಎಂದಿದ್ದಾರೆ.