ಚಾಮರಾಜನಗರ: ವಿದ್ಯಾರ್ಥಿಗಳು, ರೈತರ ಹೋರಾಟ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಒತ್ತಡ ಹಾಕಿ ಉಳಿಸಿಕೊಂಡ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಕಾಲೇಜಿನಲ್ಲಿ ಮುಂದಿನ ವರ್ಷದಿಂದ ಕೋರ್ಸ್ಗಳು ಆರಂಭವಾಗಲಿವೆ.
ಬೆಳಗಾವಿ ಜಿಲ್ಲೆಗೆ ಸ್ಥಳಾಂತರಗೊಂಡಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ಜಿಲ್ಲೆಯಲ್ಲಿಯೇ ಉಳಿಸಿ ಮೈಸೂರು ವಿವಿಗೆ ಹಸ್ತಾಂತರಿಸಿ ಕೌಶಲ್ಯಾಧಾರಿತ ತರಬೇತಿ ನೀಡಲು ಯೋಜಿಸಲಾಗಿತ್ತು. ಆದರೆ ಯಾವುದೇ ಕೋರ್ಸ್ಗಳು ಆರಂಭವಾಗದಿದ್ದರಿಂದ ವಿದ್ಯಾರ್ಥಿಗಳು ಬೇರೆ ಕಾಲೇಜಿನಲ್ಲಿ ಪ್ರವೇಶಾತಿ ಪಡೆದಿದ್ದಾರೆ. ಪದವಿ ಕಾಲೇಜಿನ ಕಲಾ ವಿಭಾಗದಲ್ಲಿ ಒಟ್ಟು 51 ವಿದ್ಯಾರ್ಥಿಗಳಿದ್ದರು. ಅವರಲ್ಲಿ ಪ್ರಥಮ ಮತ್ತು ದ್ವೀತಿಯ ವರ್ಷದ ವಿದ್ಯಾರ್ಥಿಗಳು ಬೇರೆ ಕಾಲೇಜಿಗೆ ದಾಖಲಾಗಿದ್ದಾರೆ. ಅಂತಿಮ ವರ್ಷದಲ್ಲಿದ್ದ 8 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಎಂಎ ಮಾಡಲಿದ್ದಾರೆಂದು ಕಾಲೇಜಿನ ಪ್ರಾಂಶುಪಾಲರಾದ ಗೋವಿಂದರಾಜ್ ತಿಳಿಸಿದ್ದಾರೆ.
ಮುಂದಿನ ವರ್ಷದಿಂದ ಆರಂಭ:
ಈ ಕುರಿತು ಮೈಸೂರು ವಿವಿ ಕುಲಪತಿ ಹೇಮಂತ್ ಕುಮಾರ್ ಈಟಿವಿ ಭಾರತದೊಂದಿಗೆ ಮಾತನಾಡಿ, ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಂತೆ ಕೋರ್ಸ್ ಆರಂಭವಾಗಲಿದ್ದು, ತೆರಕಣಾಂಬಿ ಕಾಲೇಜು ಸೇರಿದಂತೆ ಮೂರು ಕಾಲೇಜುಗಳನ್ನು ಘಟಕ ಕಾಲೇಜುಗಳಾಗಿ ಸರ್ಕಾರ ಹಸ್ತಾಂತರಿಸಿದೆ. ಡಿಸೆಂಬರ್ ಅಂತ್ಯದಲ್ಲಿ ಸಮಿತಿ ರಚನೆ ಮಾಡಿ ಯಾವ ಕೋರ್ಸ್ಗಳು ಆರಂಭಿಸಬಹುದು ಎಂಬುದನ್ನು ತಿಳಿದುಕೊಳ್ಳಲಿದ್ದು, ಗ್ರಾಮೀಣ ಕೌಶಲ್ಯಾಧಾರಿತ ಶಿಕ್ಷಣ ನೀಡುತ್ತೇವೆ. ಮುಂದಿನ ಶೈಕ್ಷಣಿಕ ವರ್ಷದಿಂದ ಕೋರ್ಸ್ಗಳು ಆರಂಭವಾಗಲಿವೆ ಎಂದು ತಿಳಿಸಿದ್ದಾರೆ.