ಚಾಮರಾಜನಗರ: ನಿಶಾಚರಿಯಾದ ಗೂಬೆ ಹಗಲಿನಲ್ಲಿ ತನ್ನ ಮರಿಗಾಗಿ ಇಲಿಯನ್ನು ಬೇಟೆಯಾಡಿದ ಅಪರೂಪದ ವಿಡಿಯೋವೊಂದು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದು 'ಈಟಿವಿ ಭಾರತ'ಕ್ಕೆ ಲಭ್ಯವಾಗಿದೆ.
ಮೈಸೂರಿನ ವನ್ಯಜೀವಿ ಛಾಯಗ್ರಾಹಕರಾದ ವೇಣುಗೋಪಾಲ್ ಮತ್ತು ಅಂಜನಾ ಸುಜಯ್ ಕಾಂತ್ ಕಳೆದ 3 ತಿಂಗಳಿನಿಂದ ನಿರಂತರ ಪರಿಶ್ರಮ ಪಟ್ಟು ಚಾಮರಾಜನಗರ ಹಾಗೂ ಮೈಸೂರಿನಲ್ಲಿ 7 ಜಾತಿ ಗೂಬೆಯ ಫೋಟೋಗಳು ಹಾಗೂ ವಿಡಿಯೋಗಳನ್ನು ಸೆರೆ ಹಿಡಿದಿದ್ದಾರೆ. ಈ ಅಪರೂಪದ ಗೂಬೆಯ ಫೋಟೋಗಳು ಹಾಗೂ ವಿಡಿಯೋ ಈಟಿವಿ ಭಾರತಕ್ಕೆ ಲಭ್ಯವಾಗಿದೆ.
ಚಾಮರಾಜನಗರ - ನಂಜನಗೂಡು ರಸ್ತೆಯಲ್ಲಿರುವ ಕಾಲುವೆ ಪೊಟರೆಯೊಂದರಲ್ಲಿ ಇಂಡಿಯನ್ ರಾಕ್ ಗೂಬೆ (INDIAN ROCK OWL) ಜಾತಿಯ ಮರಿ ಗೂಬೆಯೊಂದು ಮಧ್ಯಾಹ್ನದ ವೇಳೆ ಹಸಿವಿನಿಂದ ಚೀರಿದಾಗ ಗಂಡು ಗೂಬೆ ಇಲಿಯೊಂದನ್ನು ಬೇಟೆಯಾಡಿ ಮರಿಗೆ ಎಸೆಯುತ್ತದೆ. ತಕ್ಷಣವೇ ಗೂಬೆ ಮರಿ ಇಲಿಯನ್ನು ನುಂಗಿ ತನ್ನ ಹಸಿವವನ್ನು ನೀಗಿಸಿಕೊಳ್ಳುತ್ತದೆ. ಹಗಲಿನಲ್ಲಿ ಗೂಬೆ ಇಲಿ ಬೇಟೆಯಾಡಿ ತಿನ್ನುವ ದೃಶ್ಯ ಸೆರೆ ಹಿಡಿಯಲು ಛಾಯಾಗ್ರಾಹಕರು ಬಹಳ ಶ್ರಮ ವಹಿಸಿದ್ದು, ಸತತ 8 ಗಂಟೆಗಳ ಕಾಲ ಕಾದು ಕುಳಿತಿದ್ದಾರೆ.
ರೈತ ಸ್ನೇಹಿ ಗೂಬೆ: ವನ್ಯಜೀವಿ ಛಾಯಾಗ್ರಾಹಕ ವೇಣುಗೋಪಾಲ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಹಾವಿನಂತೆ ಗೂಬೆಯೂ ರೈತ ಸ್ನೇಹಿಯಾಗಿದೆ. ಹುಟ್ಟಿದ 21 ದಿನಗಳ ನಂತರ ಗೂಬೆ ಇಲಿ ತಿನ್ನಲು ಆರಂಭಿಸಲಿದ್ದು, ಸರಾಸರಿ ಒಂದು ಗೂಬೆ 6 ತಿಂಗಳಿನಲ್ಲಿ 1 ಸಾವಿರ ಇಲಿ ತಿನ್ನಲಿದೆ ಎಂದು ಅವರು ಹೇಳಿದರು.
ಮೂಢನಂಬಿಕೆಗೆ ಅಪರೂಪದ ಪಕ್ಷಿಗಳು ಬಲಿಯಾಗುತ್ತಿದೆ. ಶ್ರೀಮಂತರು ಹಣ ಬರಲೆಂದು ಇದನ್ನು ಬಲಿಕೊಟ್ಟರೆ, ಇನ್ನೂ ಕೆಲವರು ಹೊಟ್ಟೆಪಾಡಿಗಾಗಿ ಜ್ಯೋತಿಷ್ಯಕ್ಕೆ ಇದನ್ನು ಬಳಸಿಕೊಂಡು ಆಹಾರ ನೀಡದೆ ಸಾಯಿಸುತ್ತಾರೆ. ರೈತ ಸ್ನೇಹಿಯಾಗಿರುವ ಗೂಬೆ ಉಳಿವಿಗೆ ಅಭಿಯಾನ ನಡೆಸುವ ಅನಿವಾರ್ಯತೆ ಮತ್ತು ಅಗತ್ಯತೆ ಈಗ ಇದೆ ಎಂದು ವೇಣುಗೋಪಾಲ್ ಅಭಿಪ್ರಾಯಪಟ್ಟರು.