ಚಾಮರಾಜನಗರ: ಕಲ್ಲು ಕ್ವಾರಿಯೊಂದರಲ್ಲಿ ಚಿರತೆ ಪ್ರತ್ಯಕ್ಷವಾಗಿ ಗಣಿ ಕಾರ್ಮಿಕರು ದಿಕ್ಕಾಪಾಲಾಗಿ ಓಡಿರುವ ಘಟನೆ ಚಾಮರಾಜನಗರ ತಾಲೂಕಿನ ನಂಜದೇವನಪುರದಲ್ಲಿ ನಡೆದಿದೆ.
ಗ್ರಾಮದ ಮರಯ್ಯ ಎಂಬುವವರ ಕರಿಕಲ್ಲು ಕ್ವಾರಿಯಲ್ಲಿ ಆಟವಾಡುತ್ತಿರುವ ಚಿರತೆಗಳನ್ನು ಕಂಡು ಕಾರ್ಮಿಕರು ಹೆದರಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು , ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ನಂಜೇದೇವನಪುರ ಸುತ್ತಮುತ್ತಲಿನ ಬಹುತೇಕ ಜಮೀನುಗಳಲ್ಲಿ ಕಪ್ಪುಶಿಲೆ ಗಣಿಗಾರಿಕೆ ಹಲವಾರು ವರ್ಷಗಳಿಂದ ನಡೆಯುತ್ತಿರುವುದರಿಂದ ಮಣ್ಣು ಹಾಗೂ ಕಲ್ಲುಗುಡ್ಡೆಗಳು, ದೊಡ್ಡ ಗುತ್ತಿಗಳಾಗಿರುವುದರಿಂದ ಕಾಡುಪ್ರಾಣಿಗಳಿಗೆ ವಾಸಸ್ಥಳವಾಗಿ ಮಾರ್ಪಟ್ಟಿದ್ದು, ಚಿರತೆಗಳ ಆವಾಸ ಸ್ಥಾನವಾಗಿದೆ.
ಕಳೆದ 15 ದಿನಗಳಿಂದ ಜನರ ಕಣ್ಣಿಗೆ ಆಗಾಗ ಚಿರತೆ ಕಾಣಿಸಿಕೊಳ್ಳುತ್ತಿರುವುದರಿಂದ ಜಮೀನುಗಳಿಗೆ ತೆರಳಲು ರೈತರು ಭಯ ಬೀಳುವ ಸ್ಥಿತಿ ನಿರ್ಮಾಣವಾಗಿದೆ. ಕಳೆದ 4 ದಿನಗಳ ಹಿಂದೆ ಅರಣ್ಯ ಇಲಾಖೆ, ಚಿರತೆ ಸೆರೆಗೆ ಬೋನಿಟ್ಟು ಕಾಯುತ್ತಿದ್ದು, ಚಿರತೆಗಳಂತೂ ಬೀಳುತ್ತಿಲ್ಲ. ಇತ್ತ ಜನರ ಭಯವೂ ತಪ್ಪದ ಸ್ಥಿತಿ ನಿರ್ಮಾಣವಾಗಿದ್ದು, ಅರಣ್ಯ ಇಲಾಖೆ ತುರ್ತು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.