ಚಾಮರಾಜನಗರ : ಚಿರತೆ ದಾಳಿಗೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಹನೂರು ತಾಲೂಕಿನ ಕಗ್ಗಲಿಗುಂದಿ ಗ್ರಾಮದ ಬಾಲಕಿ ಸುಶೀಲ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಮನೆ ಮುಂದೆ ಆಟವಾಡುತ್ತಿದ್ದ ಬಾಲಕಿ ಸುಶೀಲ ಮೇಲೆ ಚಿರತೆ ದಾಳಿ ನಡೆಸಿತ್ತು. ಚಿರತೆ ಹೊತ್ತೊಯ್ಯುವ ವೇಳೆ ಬಾಲಕಿ ಜೋರಾಗಿ ಬೊಬ್ಬೆ ಹಾಕಿದ್ದು, ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿದ್ದರು. ಈ ವೇಳೆ ಜನರನ್ನು ಕಂಡ ಚಿರತೆ ಬಾಲಕಿಯನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿತ್ತು.
ಘಟನೆ ವಿವರ : ಕಳೆದ ಜೂ.26 ರಂದು ಜಿಲ್ಲೆಯ ಹನೂರು ತಾಲೂಕಿನ ಚಿಕ್ಕ ಮಾಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಗ್ಗಲಿಗುಂದಿ ಗ್ರಾಮದ ರಾಮು ಹಾಗೂ ಲಲಿತಾ ಎಂಬವರ ಪುತ್ರಿ ಸುಶೀಲಾ ತಮ್ಮ ಮನೆಯ ಮುಂಭಾಗದಲ್ಲಿ ಆಟವಾಡುತ್ತಿದ್ದಳು. ಈ ವೇಳೆ ಅಲ್ಲಿಗೆ ಬಂದ ಚಿರತೆಯೊಂದು ಆಟವಾಡುತ್ತಿದ್ದ ಬಾಲಕಿ ಮೇಲೆ ಏಕಾಏಕಿ ದಾಳಿ ನಡೆಸಿದೆ. ಬಾಲಕಿ ಮೇಲೆ ಇದ್ದಕ್ಕಿದ್ದಂತೆ ಎರಗಿದ ಚಿರತೆ ಸುಶೀಲಳನ್ನು ಸುಮಾರು 200 ಮೀಟರ್ ದೂರಕ್ಕೆ ಎಳೆದೊಯ್ದಿತ್ತು.
ಈ ಸಂದರ್ಭದಲ್ಲಿ ಮಗುವಿನ ಚೀರಾಟ ಕೇಳಿದ ಪೋಷಕರು ಹಾಗೂ ಗ್ರಾಮಸ್ಥರು ಯಾರೋ ಕಳ್ಳರು ಬಂದಿದ್ದಾರೆ. ಮಗುವನ್ನು ಹೊತ್ತುಕೊಂಡು ಹೋಗುತ್ತಿದ್ದಾರೆ ಎಂದು ಭಾವಿಸಿ ದೊಣ್ಣೆಗಳನ್ನು ಹಿಡಿದುಕೊಂಡು ಬಂದಿದ್ದಾರೆ. ಈ ವೇಳೆ ಗ್ರಾಮಸ್ಥರ ಕೂಗಾಟ - ಚೀರಾಟದಿಂದ ಬೆದರಿದ ಚಿರತೆ ಮಗುವನ್ನು ಸ್ಥಳದಲ್ಲೇ ಬಿಟ್ಟು ಕಾಡಿನತ್ತ ಪರಾರಿಯಾಗಿತ್ತು.
ಇದನ್ನೂ ಓದಿ : Elephant attack: ಕೊಡಗುದಲ್ಲಿ ವಯೋವೃದ್ಧ ಕಾರ್ಮಿಕನ ಮೇಲೆ ಕಾಡಾನೆ ದಾಳಿ.. ತೋಟದ ರೈಟರ್ನಿಂದ ಉಳಿಯಿತು ಪ್ರಾಣ
ಗ್ರಾಮಸ್ಥರು ಸ್ಥಳಕ್ಕೆ ತಲುಪುವಷ್ಟರಲ್ಲಿ ಚಿರತೆ ಬಾಲಕಿಯನ್ನು ಗಂಭೀರವಾಗಿ ಗಾಯಗೊಳಿಸಿತ್ತು. ತಕ್ಷಣ ಗ್ರಾಮಸ್ಥರು ಅರಣ್ಯ ಇಲಾಖೆ ಹಾಗೂ 108 ಆಂಬ್ಯುಲೆನ್ಸ್ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ತುರ್ತು ವೈದ್ಯಕೀಯ ಸಿಬ್ಬಂದಿ ಮೂರ್ತಿ ಹಾಗೂ ಚಾಲಕ ಲಿಂಗರಾಜು ಪ್ರಥಮ ಚಿಕಿತ್ಸೆ ನೀಡಿ ಕಾಮಗೆರೆ ಖಾಸಗಿ ಆಸ್ಪತ್ರೆಗೆ ಬಾಲಕಿಯನ್ನು ದಾಖಲಿಸಿದ್ದರು. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಬಳಿಕ ತೀವ್ರತರವಾಗಿ ಗಾಯಗೊಂಡಿದ್ದ ಬಾಲಕಿಯನ್ನು ಮೈಸೂರಿನ ಚೆಲುವಾಂಬ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಾಲಕಿಯ ದವಡೆ ಮೂಳೆ ಮುರಿದಿದ್ದರಿಂದ ಮುಖ ಊದಿಕೊಂಡಿತ್ತು. ಬಾಲಕಿಗೆ ಕಳೆದ 14 ದಿನಗಳಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಜು.11ರಂದು ಆಪರೇಷನ್ ಕೂಡ ಮಾಡಲಾಗಿತ್ತು. ಆದರೆ ಇಂದು ಚಿಕಿತ್ಸೆಗೆ ಸ್ಪಂದಿಸದೇ ಬಾಲಕಿ ಅಸುನೀಗಿದ್ದಾಳೆ.
14 ದಿನ ಕಳೆದರೂ ಸೆರೆಸಿಗದ ಚಿರತೆ : ಇನ್ನು, ಚಿರತೆ ದಾಳಿ ನಡೆಸಿ ಸುಮಾರು 14 ದಿನಗಳು ಕಳೆದಿವೆ. ಚಿರತೆ ಸೆರೆಗಾಗಿ ಚಿರತೆ ದಾಳಿ ನಡೆಸಿದ ಸ್ಥಳ ಹಾಗೂ ಅಕ್ಕಪಕ್ಕದಲ್ಲಿ ಮೂರು ಬೋನ್ ಗಳನ್ನು ಇಡಲಾಗಿದೆ. ಆದರೂ ಇದುವರೆಗೂ ಅರಣ್ಯ ಇಲಾಖೆಗೆ ಚಿರತೆಯನ್ನು ಸೆರೆ ಹಿಡಿಯಲಾಗಿಲ್ಲ. ಈ ಸಂಬಂಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ :ಮನೆಯ ಮುಂಭಾಗದಿಂದಲೇ ಬಾಲಕಿಯನ್ನು 200 ಮೀ. ಎಳೆದೊಯ್ದ ಚಿರತೆ: ಜನರ ಕಿರುಚಾಟಕ್ಕೆ ಬಾಲಕಿ ಬಿಟ್ಟು ಪರಾರಿ