ಚಾಮರಾಜನಗರ: ರಾಮನಗರದಲ್ಲೇ ಡಿಕೆಶಿ ಅವರಿಗೆ ರಾಜಕೀಯ ಶಕ್ತಿ ಇಲ್ಲವೆಂದು ಉಪಚುನಾವಣೆ ಮೇಲೆ ಡಿಕೆಶಿ ಬಂಧನದ ಪರಿಣಾಮ ಕುರಿತು ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ರಮೇಶ್ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮನಗರ ಜಿಲ್ಲೆಯಲ್ಲಿ ಕಾಂಗ್ರೆಸ್ ಎಷ್ಟು ಸ್ಥಾನ ಗೆದ್ದಿದೆ ಅನ್ನೋದಕ್ಕಿಂದ ತಾವು ಪ್ರಭಾವಿಗಳು ಅನ್ನೋದನ್ನಷ್ಟೇ ಅವರು ಬಿಂಬಿಸಿಕೊಂಡಿದ್ದಾರೆ. ಆದ್ರೆ ವಾಸ್ತವವಾಗಿ ಕಾಂಗ್ರೆಸ್ ಪಕ್ಷಕ್ಕೆ ರಾಮನಗರದಲ್ಲಿ ಏನು ಲಾಭವಾಗಿಲ್ಲ ಎಂದು ವ್ಯಂಗ್ಯವಾಡಿದರು.
ಅವರ ಬಂಧನವನ್ನು ರಾಜಕೀಯ ದ್ವೇಷ ಎಂದು ಬಿಂಬಿಸುತ್ತಿರುವುದು ಸರಿಯಲ್ಲ. ನಿರಪರಾಧಿಯಾಗಿದ್ದರೇ ಒಳಗಿರಬೇಕಿಲ್ಲ, ಡಿಕೆಶಿ ಕೇವಲ ರಾಜಕೀಯ ಪ್ರತಿಸ್ಪರ್ಧಿಯಷ್ಟೆ. ಅವರಿಗೆ ಕಷ್ಟ ಬರಲಿ ಎಂದು ನಾನು ಬಯಸಲ್ಲ. ಆದ್ರೆ ಅವರಿಗೆ ಹತಾಶೆಯ ಮನೋಭಾವ ಇದೆ ಎಂದು ತೇಜಸ್ವಿನಿ ರಮೇಶ್ ವಾಗ್ದಾಳಿ ನಡೆಸಿದರು.
ದೊಡ್ಡ ಸಭ್ಯಸ್ಥರ ರೀತಿ ಮಾತನಾಡುತ್ತಿದ್ದ ಪಿ. ಚಿದಂಬರಂ ಆರ್ಥಿಕವಾಗಿ ದೊಡ್ಡ ಪೆಟ್ಟು ನೀಡಿದ್ದಾರೆ. ಡಿಕೆಶಿ ಅವರ ಹಣದ ವಹಿವಾಟು ಅಂತಾರಾಷ್ಟ್ರೀಯ ಮಟ್ಟಕ್ಕೆ ಹಬ್ಬಿದೆ. ಭ್ರಷ್ಟರನ್ನು, ಭ್ರಷ್ಟಾಚಾರದ ಆರೋಪಿಗಳನ್ನು ಕಾಂಗ್ರೆಸ್ ಹೈಕಮಾಂಡ್ ಬೆಂಬಲಿಸುತ್ತಿರುವುದು ದೊಡ್ಡ ದುರಂತ. ಆ ಪಕ್ಷ ಮತ್ತಷ್ಟು ಅಧಃಪತನಕ್ಕಿಳಿಯುತ್ತದೆ ಎಂದು ತೇಜಸ್ವಿನಿ ಅಭಿಪ್ರಾಯಪಟ್ಟರು.