ಗುಂಡ್ಲುಪೇಟೆ: ಎಸ್ಎಸ್ಎಲ್ಸಿ ಮಕ್ಕಳಿಗೆ ಜೂನ್ 25 ರಿಂದ ಪರೀಕ್ಷೆ ಆರಂಭವಾಗುತ್ತಿರುವುದರಿಂದ ಈ ಭಾರಿಯ ಫಲಿತಾಂಶ ಹೆಚ್ಚಳವಾಗಬೇಕು ಎಂಬ ದೃಷ್ಟಿಯಿಂದ ತಾಲ್ಲೂಕಿನ ಪ್ರೌಢ ಶಾಲಾ ಶಿಕ್ಷಕರು ಹಾಗೂ ಅಧಿಕಾರಿಗಳು ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ನೀಡಿ ತರಬೇತಿ ನೀಡಿ ಪರೀಕ್ಷೆಗೆ ತಯಾರಾಗುವಂತೆ ಸೂಚನೆ ನೀಡುತ್ತಿದ್ದಾರೆ.
ಲಾಕ್ ಡೌನ್ ಇದ್ದಾಗಲೂ ಕೂಡ ವಿದ್ಯಾರ್ಥಿಗಳ ಪೋನ್ ನಂಬರ್ ಪಡೆದು ಮಕ್ಕಳಿಗೆ ಮಾದರಿಯ ಪ್ರಶ್ನೆ ಪತ್ರಿಕೆಗಳನ್ನು ಕಳುಹಿಸಿ ಉತ್ತರ ಬರೆಯಿಸಿ ತರಬೇತಿ ನೀಡುತ್ತಿದ್ದಾರೆ. ಕೆಲ ಮಕ್ಕಳ ಬಳಿ ಸ್ಮಾರ್ಟ್ಫೋನ್ ಇಲ್ಲವಾದಲ್ಲಿ ಆ ಗ್ರಾಮದಲ್ಲಿ ಇರುವ ವಿದ್ಯಾರ್ಥಿಗಳನ್ನು ಒಂದು ಗುಂಪು ಮಾಡಿ ಅದಕ್ಕೊಬ್ಬ ಲೀಡರ್ ನೇಮಿಸಿ ಅವರಿಗೆ ಪ್ರಶ್ನೆಗಳನ್ನು ಕಳುಹಿಸಿ ಎಲ್ಲರಿಗೂ ತಲುಪಿಸುವಂತೆ ಮಾಡಿ ತರಬೇತಿ ನೀಡುತ್ತಿದ್ದಾರೆ.
ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಹೆಚ್ಚಿನ ತರಬೇತಿ ನೀಡುವ ಸಲುವಾಗಿ ಆ ವಿದ್ಯಾರ್ಥಿಗಳ ಸಂಪರ್ಕದಲ್ಲಿದ್ದು ಶಿಕ್ಷಕರು ಪರೀಕ್ಷೆಯಲ್ಲಿ ಉತ್ತೀರ್ಣರಾಗುವಷ್ಟರ ಮಟ್ಟಿಗೆ ಪ್ರೇರೇಪಿಸುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ತಾಲ್ಲೂಕು ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಜಿಲ್ಲೆಯಲ್ಲಿ ಕೊನೆಯ ಸ್ಥಾನದಲ್ಲಿದೆ. ಈ ಭಾರಿ ಫಲಿತಾಂಶವನ್ನು ಉತ್ತಮ ಪಡಿಸಲು ತಾಲ್ಲೂಕಿನ ಶಿಕ್ಷಕರು ಶ್ರಮವಹಿಸುತ್ತಿದ್ದಾರೆ.
ಅನುದಾನ ಪಡೆಯುತ್ತಿರುವ ಶಾಲೆಗಳ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರಿಗೆ, ಶಿಕ್ಷಣಾಧಿಕಾರಿಗಳು ಫಲಿತಾಂಶಕ್ಕಾಗಿ ಶ್ರಮಿಸುವಂತೆ ಸೂಚನೆ ನೀಡಿ , ಫಲಿತಾಂಶ ಕುಂಟಿತವಾದರೆ ನೋಟಿಸ್ ನೀಡುವುದಾಗಿ ಎಚ್ಚರಿಕೆ ನೀಡಿದ್ದರು. ಲಾಕ್ ಡೌನ್ ಆದರೂ ಸಹ ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ತೊಂದರೆಯಾಗಬಾರದು ಹಾಗೂ ಪರೀಕ್ಷೆಗೆ ಸಿದ್ದರಾಗಬೇಕೆಂದು ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಪರೀಕ್ಷೆಗೆ ಹೇಗೆ ಸಿದ್ದರಾಗಬೇಕು ಎಂಬುದನ್ನು ತಿಳಿಸಲಾಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಿವಮೂರ್ತಿ ತಿಳಿಸಿದರು.