ಚಾಮರಾಜನಗರ: ಓದುವವರ ಸಂಖ್ಯೆಯೇ ಕಡಿಮೆ, ಅದರಲ್ಲೂ ಯುವಜನತೆಯಂತೂ ಪುಸ್ತಕಗಳಿಂದ ದೂರವೇ ಇರುತ್ತಾರೆ ಎಂಬ ಮಾತಿದೆ. ಆದರೆ ಚಾಮರಾಜನಗರದ 23 ವರ್ಷದ ಯುವತಿಯೋರ್ವರು ಕಾದಂಬರಿ ಬರೆದು ಸೈ ಎನಿಸಿಕೊಂಡಿದ್ದಾರೆ.
ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಡೇರಿ ನಡೆಸುವ ಮಹೇಶ್ ಮತ್ತು ಸುಧಾ ಎಂಬುವರ ಪುತ್ರಿ ಕೀರ್ತನಾ ಕಳೆದ ವರ್ಷದಲ್ಲಿ ಕೊರೊನಾ ಲಾಕ್ ಡೌನ್ ಸಮಯವನ್ನೇ ಸದುಪಯೋಗ ಮಾಡಿಕೊಂಡು "ತನ್ಮಯಳಾದೆ ನಾ ನಿನ್ನ ಪ್ರೀತಿಗೆ" ಎಂಬ ಕಾದಂಬರಿ ಬರೆದಿದ್ದಾರೆ.
ಕಾದಂಬರಿಯನ್ನು ಇಂದು ಜಿಲ್ಲಾ ಕಸಾಪ ಸಭಾಂಗಣದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಮಹಾದೇವ ಶಂಕನಪುರ ಬಿಡುಗಡೆ ಮಾಡಿದರು. ಇದು ಅವರ ಚೊಚ್ಚಲ ಕಾದಂಬರಿಯಾಗಿದ್ದು, ವಿಮರ್ಶಕರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.
ಕವನ, ಕಥೆ ಬರೆಯದೇ ಕಾದಂಬರಿಗೆ ಎಂಟ್ರಿ:
ಸಾಮಾನ್ಯವಾಗಿ ಯುವಜನರು ಸಣ್ಣಕಥೆ, ಕವನಗಳ ಮೂಲಕವೇ ತಮ್ಮ ಬರವಣಿಗೆಯನ್ನು ಪ್ರಾರಂಭಿಸುತ್ತಾರೆ. ಆದರೆ, ಕೀರ್ತನಾ ಮಾತ್ರ ನೇರವಾಗಿ ಕಾದಂಬರಿ ಮೂಲಕವೇ ಸಾಹಿತ್ಯ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಕೊರೊನಾ ಲಾಕ್ಡೌನ್ ಸಮಯವನ್ನು ಸದುಪಯೋಗ ಪಡಿಸಿಕೊಂಡು 6 ತಿಂಗಳ ಅವಧಿಯಲ್ಲಿ ಕಾದಂಬರಿಯನ್ನು ಹೊರತಂದು ಗಮನ ಸೆಳೆದಿದ್ದಾರೆ.
ಬದುಕಿನ ವಿವಿಧ ಮಜಲುಗಳಾದ ಪ್ರೀತಿ, ಸ್ನೇಹ, ಕುಟುಂಬ, ಜಗಳ, ಕೋಪ, ಕಪಟತನ, ಅನುಮಾನ, ನೋವು, ದುಃಖ ಹೀಗೆ ಎಲ್ಲ ಭಾವನೆಗಳನ್ನು ಒಳಗೊಂಡ ಕಾದಂಬರಿ ಇದಾಗಿದೆ.
ಇದನ್ನೂ ಓದಿ: ರಾಜ್ಯ ಸರ್ಕಾರದಿಂದ ಮಹತ್ವದ ಘೋಷಣೆ: ಜನವರಿ 3 ರಿಂದ ಮಕ್ಕಳಿಗೆ ಕೋವಿಡ್ ಲಸಿಕೆ
ತನಗೆ ಶಿವರಾಮ ಕಾರಂತರ ಕೃತಿಗಳೆಂದರೆ ಅಚ್ಚುಮೆಚ್ಚು. ಅವರ ವ್ಯಕ್ತಿತ್ವ, ಪುಸ್ತಕ ತನ್ನಲ್ಲಿ ಸಾಕಷ್ಟು ಪ್ರಭಾವ ಬೀರಿದೆ. ಈಗಾಗಲೇ ನೂರಾರು ಮಂದಿ ಕಾದಂಬರಿ ಬಗ್ಗೆ ಉತ್ತಮ ಮಾತುಗಳನ್ನು ಹೇಳಿದ್ದು, ಶೀಘ್ರವೇ ಮತ್ತೊಂದು ಕೃತಿ ಹೊರತರುವ ಬಗ್ಗೆ ಯೋಚಿಸುತ್ತಿದ್ದೇನೆ. ಮನಸ್ಸಿನಲ್ಲಿ ವಿಭಿನ್ನ ವಸ್ತು ವಿಷಯವೊಂದಿದೆ ಎಂದು ಕೀರ್ತನಾ ತಿಳಿಸಿದ್ದಾರೆ.